ರಾಜ್ಯದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿ ಪ್ರವೇಶ ಮಾಡಿರುವುದು ಹಾಗೂ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗದಿರುವ ಕಾರಣ ಜಲಾಶಯಗಳ ನೀರಿನ ಮಟ್ಟದಲ್ಲಿ ಕುಸಿತವಾಗುತ್ತಿದೆ.
ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲೂ ಮಳೆ ಕೊರತೆ ಕಾಡುತ್ತಿದ್ದು, ಹೀಗಾಗಿ ಭಾನುವಾರದಂದು ಕೆ.ಆರ್.ಎಸ್. ಜಲಾಶಯದ ನೀರಿನ ಮಟ್ಟ 77.68 ಅಡಿಗೆ ಕುಸಿದಿದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 106.60 ಅಡಿಗಳಷ್ಟು ಇತ್ತು.
ಪ್ರಸ್ತುತ ಜಲಾಶಯಕ್ಕೆ 552 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 571 ಕ್ಯುಸೆಕ್ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ. ನಾಲೆಗಳಿಗೆ ಹರಿಯುತ್ತಿದ್ದ ನೀರನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಜಲಾಶಯದ ನೀರಿನ ಮಟ್ಟ 74 ಅಡಿಗಿಂತಲೂ ಕುಸಿದರೆ ನೀರನ್ನು ಕುಡಿಯುವುದಕ್ಕೆ ಮಾತ್ರ ಮೀಸಲಿಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.