ಶ್ರೀರಂಗಪಟ್ಟಣ: ಒಂದೆಡೆ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ಈ ಮಧ್ಯೆ ಕೆ.ಆರ್.ಎಸ್ ಜಲಾಶಯಕ್ಕೆ ಅಕ್ರಮವಾಗಿ ಮೋಟಾರ್ ಅಳವಡಿಸಿ ಫಾರ್ಮ್ ಹೌಸ್ ಗೆ ನೀರು ಪೂರೈಕೆ ಮಾಡುತ್ತಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಡ್ಯಾಂ ಹಿನ್ನೀರಿಗೆ ಹೊಂದಿಕೊಂಡಿರುವ ಫಾರ್ಮ್ ಹೌಸ್ ಗೆ ಜಲಾಶಯದಲ್ಲಿ ಮೋಟಾರ್ ಅಳವಡಿಸಿ ಪೈಪ್ ಲೈನ್ ಮೂಲಕ ಜಲಾಶಯದಿಂದ ನೀರು ತೆಗೆದುಕೊಳ್ಳಲಾಗುತ್ತಿದೆ. ಫಾರ್ಮ್ ಹೌಸ್ ನಲ್ಲಿ ಬೆಳೆದಿರುವ ಬೆಳೆಗಳಿಗೆ ನೀರು ಪೂರೈಸಲಾಗಿದೆ. ಇದರಿಂದ ರೈತರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಆರ್ ಎಸ್ ನಲ್ಲಿ ಕೇವಲ 16 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಸುತ್ತಮುತ್ತ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿದೆ. ಹೀಗಿರುವಾಗ ಅಕ್ರಮವಾಗಿ ಮೋಟಾರ್ ಅಳವಡಿಸಿ ನೀರು ಕಳ್ಳತನ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮೋಟಾರ್ ತೆರವು ಮಡಿ ವಿದ್ಯುತ್ ಕಡಿತಗೊಳಿಸಿದ್ದಾರೆ.