ಬೆಂಗಳೂರು: ಕೆ.ಆರ್.ಎಸ್. ಅಣೆಕಟ್ಟಿನ ಸುತ್ತಮುತ್ತ ಪ್ರದೇಶದಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಅವಕಾಶ ನೀಡುವ ಕುರಿತು ತಜ್ಞರ ತೀರ್ಮಾನವೇ ಅಂತಿಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಣೆಕಟ್ಟೆಗೆ ಕಿಂಚಿತ್ತೂ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಮೊದಲಿಗಿಂತಲೂ ಈಗ ಹೆಚ್ಚಿದೆ ಎಂದು ನ್ಯಾಯಾಲಯ ತಿಳಿಸಿದೆ. ಸ್ಟೋನ್ ಕ್ರಷರ್ ಗೆ ಅವಕಾಶ ಕೋರಿ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಮಂಚಮ್ಮದೇವಿ ಸ್ಟೋನ್ ಕ್ರಶರ್ ಮತ್ತು ಎಂ ಸ್ಯಾಂಡ್ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠದಲ್ಲಿ ನಡೆದಿದೆ.
ವಾದ ಆಲಿಸಿದ ನ್ಯಾಯಾಲಯ ಕೆಆರ್‌ಎಸ್ ಜಲಾಶಯ ಸುತ್ತಲಿನ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮತ್ತು ಅದರ ಆಚೆಗೆ ಯಾವುದೇ ಕಲ್ಲು ಗಣಿಗಾರಿಕೆ ಹಾಗೂ ಸ್ಪೋಟಕ ಚಟುವಟಿಕೆಗಳಿಗೆ ಸಂಬಂಧಿಸಿದ ತಕರಾರುಗಳಿಗೆ ಪರಿಹಾರ ಪಡೆಯಲು ಕರ್ನಾಟಕ ರಾಜ್ಯ ಜಲಾಶಯಗಳ ಸುರಕ್ಷಿತ ಸಮಿತಿ ಮುಂದೆ ಮನವಿ ಸಲ್ಲಿಸಬೇಕು. ಈ ವಿಚಾರದಲ್ಲಿ ಸಮಿತಿಯ ತೀರ್ಮಾನವೇ ಅಂತಿಮ ಎಂದು ಹೇಳಿದ್ದು, ಮನವಿಯನ್ನು ತಜ್ಞರ ಸಮಿತಿಯ ಮುಂದೆ ಸಲ್ಲಿಸುವಂತೆ ನಿರ್ದೇಶನ ನೀಡಿ ಅರ್ಜಿ ವಿಲೇವಾರಿ ಮಾಡಿದೆ.