ಬೆಂಗಳೂರು: ಕಬಿನಿ ಹಾಗೂ ಕೃಷ್ಣರಾಜಚರ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜುಲೈ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.
ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಗಿನ ಅರ್ಪಿಸಲಿದ್ದಾರೆ. ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳು ಭರ್ತಿಯಾದ ಹಿನ್ನಲೆಯಲ್ಲಿ ಜುಲೈ 29ರಂದು ಬೆಳಗ್ಗೆ 11 ಗಂಟೆಗೆ ಕೆ.ಆರ್.ಎಸ್. ಕಾವೇರಿ ಮಾತೆ ಪ್ರತಿಮೆ ಬಳಿ ಪೂಜೆ ಹಾಗೂ ಬಾಗಿನ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಹೆಗ್ಗಡೆದೇವನಕೋಟೆ ತಾಲೂಕು ಬೀಚನಹಳ್ಳಿಯ ಕಬಿನಿ ಜಲಾಶಯ ಬಳಿ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಸಚಿವರಾದ ಎನ್. ಚಲುವರಾಯಸ್ವಾಮಿ, ಕೆ. ವೆಂಕಟೇಶ್, ಎನ್.ಎಸ್. ಬೋಸರಾಜು, ಹೆಚ್.ಸಿ. ಮಹದೇವಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಸಿ. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಆಗಸ್ಟ್ ಮೊದಲ ವಾರ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ತುಂಗಭದ್ರಾ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಅರ್ಪಿಸಲಿದ್ದಾರೆ.