ಬಿ.ಆರ್. ಚೋಪ್ರಾರ ’ಮಹಾಭಾರತ’ ಧಾರಾವಾಹಿಯಲ್ಲಿ ಮುಂಚೂಣಿ ಪಾತ್ರದಲ್ಲಿ ಮಿಂಚಿರುವ ನಿತೀಶ್ ಭಾರದ್ವಾಜ್ ಅದ್ಯಾವ ಮಟ್ಟಿಗೆ ಶ್ರೀಕೃಷ್ಣನ ಪಾತ್ರದಲ್ಲಿ ಪರಕಾಯ ಪ್ರವೇಶಿಸಿದ್ದರೆಂದರೆ, ಬಹಳಷ್ಟು ಮಂದಿಗೆ ಶ್ರೀಕೃಷ್ಣನ ನೆನಪಾಗುತ್ತಲೇ ನಿತೀಶ್ ಮುಖವೇ ನೆನಪಾಗುತ್ತೆ.
ಧಾರಾವಾಹಿಯಲ್ಲಿ ತಮ್ಮ ಪಾತ್ರದ ಕುರಿತು ಮಾತನಾಡಿರುವ ನಿತೀಶ್ ಮೊದಲಿಗೆ ವಿಧುರನ ಪಾತ್ರ ಮಾಡಬೇಕಿತ್ತಂತೆ ! ಬಳಿಕ ಶ್ರೀಕೃಷ್ಣನ ಪಾತ್ರದ ಆಫರ್ ಬಂದಾಗ ನಿರಾಕರಿಸಿದ್ದ ನಿತೀಶ್, ಈ ಐತಿಹಾಸಿಕ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದ ದಿನಗಳನ್ನು ಸ್ಮರಿಸಿದ್ದಾರೆ.
“ನಾನು ಮೊದಲು ವಿಧುರ ಪಾತ್ರಧಾರಿಯಾಗಿ ಸೇಠ್ ಸ್ಟುಡಿಯೋಗೆ ಶೂಟಿಂಗ್‌ಗೆ ಬರಲು ಕರೆಯಲಾಗಿತ್ತು. ನಾನು ಮೇಕಪ್ ಕೋಣೆಯಲ್ಲಿದ್ದಾಗ, ವೀರೇಂದ್ರ ರಾಜ಼್ಧನ್ ಅವರು ಕಾಸ್ಟ್ಯೂಮ್ ಜೊತೆಗೆ ಬಂದು ನಾನು ವಿಧುರನ ಪಾತ್ರ ಮಾಡುತ್ತಿರುವೆ ಎಂದರು. ಇದಾದ ಮೇಲೆ ಏನಾಗುತ್ತಿದೆ ಎಂದು ಅರಿಯಲು ನಾನು ರವಿ ಚೋಪ್ರಾರನ್ನು ಭೇಟಿಯಾಗಲು ಒಳಗೆ ಹೋದಾಗ, ’ನೀನು 23-24 ವರ್ಷದವನು. ಕೆಲ ಸಂಚಿಕೆಗಳ ಬಳಿಕ ವಿಧುರ ಮುದುಕನಾಗುತ್ತಾನೆ. ಅದು ಸರಿಯಾಗಿ ಕಾಣುವುದಿಲ್ಲ ಎಂದರು”
“ಇದಾದ ಕೆಲ ದಿನಗಳ ಬಳಿಕ ಮಹಾಭಾರತದಲ್ಲಿ ನನಗೆ ಯಾವುದೇ ಕೆಲಸವಿರಲಿಲ್ಲ” ಎಂದ ನಿತೀಶ್‌ರನ್ನು ಕೆಲ ದಿನಗಳ ಬಳಿಕ ಬಿ.ಆರ್. ಚೋಪ್ರಾ ಭೇಟಿಯಾಗಿ, ನಕುಲ ಅಥವಾ ಸಹದೇವನ ಪಾತ್ರ ಮಾಡಲು ಕೋರಿದ್ದರು.
“ಮಹಾಭಾರತ ಕಥೆಯನ್ನು ಅರಿತಿದ್ದ ನನಗೆ ಏನಾದರೂ ಉತ್ತಮವಾದದ್ದು ಮಾಡುವ ಆಸೆಯಿತ್ತು. ಪ್ಯಾಕ್-ಅಪ್ ಆದ ಬಳಿಕ ನನಗೆ ನಿಜಕ್ಕೂ ಏನು ಮಾಡಬೇಕೆಂಬ ಆಸೆ ಇದೆ ಎಂದು ಚೋಪ್ರಾ ಕೇಳಿದರು. ನನಗೆ ಅಭಿಮನ್ಯುವಿನ ಪಾತ್ರ ಇಷ್ಟವೆಂದು ತಿಳಿಸಿದೆ. ಈ ಆಸೆಯನ್ನು ಈಡೇರಿಸಲು ತಂಡ ಚಿಂತನೆ ನಡೆಸಲಿದೆ ಎಂದು ಚೋಪ್ರಾ ತಿಳಿಸಿದರು”
“ಇದಾದ ಬಳಿಕ ನನಗೆ ಕೃಷ್ಣನ ಪಾತ್ರ ನೀಡುವುದಾಗಿ ಚೋಪ್ರಾ ತಿಳಿಸಿದರು. ಕೃಷ್ಣನಂಥ ಮಹಾನಾಯಕನ ಪಾತ್ರ ನಿರ್ವಹಿಸಲು ಅನುಭವಸ್ಥರು ಬೇಕೆಂದು ಅವರಿಗೆ ತಿಳಿಸಿದೆ. ಕಡೇ ಪಕ್ಷ ಸ್ಕ್ರೀನ್ ಟೆಸ್ಟ್‌ನಲ್ಲಿ ಭಾಗಿಯಾಗಲು ಚೋಪ್ರಾ ಮನವರಿಕೆ ಮಾಡಿದ ಬಳಿಕ ನಾನು ಎರಡು ವರ್ಷಗಳ ಕಾಲ ಕೃಷ್ಣನ ಪಾತ್ರದಲ್ಲಿ ನಟಿಸುವಂತಾಯಿತು” ಎಂದು ನಿತೀಶ್ ಅನುಭವ ಹಂಚಿಕೊಂಡಿದ್ದಾರೆ.
1988-1990ರ ನಡುವಿನ ಎರಡು ವರ್ಷಗಳ ಅವಧಿಯಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಮಹಾಭಾರತ, ವಾಹಿನಿಯ ಆಲ್‌ಟೈಂ ಸೂಪರ್‌ಹಿಟ್ ಶೋಗಳಲ್ಲಿ ಒಂದಾಗಿದೆ.