ಶ್ರೀ ಕೃಷ್ಣ, ಮಹಾವಿಷ್ಣುವಿನ ಅವತಾರಗಳಲ್ಲಿ ಒಬ್ಬ. “ಎಲ್ಲಿ, ಯಾವಾಗ ಅಧರ್ಮ ತಾಂಡವವಾಡುತ್ತೋ ಆಗೆಲ್ಲಾ ನಾನು ಧರ್ಮದ ರಕ್ಷಣೆಗೆ ಅವತಾರವೆತ್ತಿ ಬರುತ್ತೇನೆ” ಎಂದು ತನ್ನ ವಿರಾಟ್ ರೂಪದಲ್ಲಿ ಹೇಳಿದ್ದಾನೆ. ಧರ್ಮದ ಪರವಾಗಿ ಜೀವನವಿಡೀ ಹೋರಾಡಿದ ಕೃಷ್ಣನ ಬಾಲ ರೂಪ ಮಾತ್ರ ಅತ್ಯಂತ ಮನೋಹರ.
ಅವನ ತುಂಟ ಆಟಗಳು ಒಂದೇ ಎರಡೇ? ಕೃಷ್ಣನ ಬಗ್ಗೆ ಚಾಡಿ, ದೂರು ಹೇಳಲು ಬರುವವರು ತಮ್ಮ ಕೋಪ ಮರೆತು ಪ್ರೀತಿ, ಸಂತೋಷವನ್ನೇ ವಾಪಸ್ ಪಡೆದು ಹೋಗುತ್ತಿದ್ದರು. ಕೃಷ್ಣನೇ ಪ್ರೀತಿ, ಪ್ರೀತಿಯೇ ಕೃಷ್ಣ. ಇಂಥಹ ಮುದ್ದು ಮುಖದ ಕೃಷ್ಣನ ಚೇಷ್ಟೆಗಳು ಹೇಳತೀರದು. ಬೆಣ್ಣೆ ಕದಿಯುವಲ್ಲಿ ನಿಸ್ಸೀಮನಾದ ಇವನು, ತನ್ನ ದಂಡಿನ ಸಮೇತ ಗೋಕುಲದ ಎಲ್ಲಾ ಮನೆಯೂ ತನ್ನದೇ ಎಂಬ ಹಾಗೆ ನುಗ್ಗಿ, ಗಡಿಗೆಯ ಬೆಣ್ಣೆಯೆಲ್ಲಾ ಬರಿದು ಮಾಡದೇ ಹೋಗುತ್ತಿರಲಿಲ್ಲ.
ಕೃಷ್ಣನ ಈ ಉಪಟಳವನ್ನು ತಾಳಲಾರದೆ ಗೋಕುಲದ ಎಲ್ಲಾ ಸ್ತ್ರೀಯರೂ ಯಶೋದೆಯ ಬಳಿ ದೂರು ಕೊಡುತ್ತಾ ಇದ್ದಿದ್ದು ದಿನಚರಿಯ ಒಂದು ಭಾಗವೇ ಆಗಿ ಬಿಡುತ್ತಿತ್ತು. ಆದರೆ ಎಷ್ಟು ತಾನೇ ಯಶೋಧೆಯೂ ಸಹಿಸಬಲ್ಲಳು? ಇದಕ್ಕೊಂದು ಉಪಾಯ ಕಂಡು ಹಿಡಿಯಲೆ ಬೇಕು ಎಂದು ಕೃಷ್ಣನ ಮೈ ತುಂಬಾ ಒಡವೆಗಳನ್ನು, ಅದರಲ್ಲೂ ಕಾಲಿನಲ್ಲಿ ದಪ್ಪನೆಯ ಗೆಜ್ಜೆ ಹಾಕಿ ಬಿಡುತ್ತಿದ್ದಳು. ಈ ಕಳ್ಳ ಕೃಷ್ಣ ಯಾರದ್ದಾದರೂ ಮನೆಗೆ ಕಳ್ಳ ಹೆಜ್ಜೆಗಳನ್ನು ಇಟ್ಟು ಬರುವಾಗ ಗೆಜ್ಜೆ ಹಾಗೂ ಒಡವೆಗಳ ಶಬ್ದದಿಂದ ಮನೆಯವರಿಗೆ ಸೂಚನೆ ಸಿಗಲಿ ಅಂತ.
ಕೃಷ್ಣನೇನು ದಡ್ಡನೇ? ಆತ ತುಂಟ ಹುಡುಗರ ಗುಂಪಿನ ನಾಯಕ. ಲೋಕದ ಸಮಸ್ಯೆಗಳನ್ನು ಪರಿಹರಿಸುವ ಕೃಷ್ಣನಿಗೆ ತನ್ನ ಸಮಸ್ಯೆ ನೀಗಿಸಿಕೊಳ್ಳುವುದು ಕಷ್ಟದ ಮಾತಲ್ಲ. ತಾಯಿ ಯಶೋದೆಯ ಮರ್ಮವನ್ನು ಬಹಳ ಬೇಗ ಅರಿತ ಬಾಲ ಶ್ರೀಕೃಷ್ಣ, ಮುಂದೆ ಬೆಣ್ಣೆ ಕದಿಯಲು ಹೊಂಚು ಹಾಕುವ ಸಮಯದಲ್ಲಿ ಈ ಒಡವೆಗಳನ್ನೆಲ್ಲಾ ಬಿಚ್ಚಿಟ್ಟು, ಬೆಣ್ಣೆ ಕದ್ದು ಹಂಚಿ ತಿಂದು ನಂತರ ಒಡವೆಗಳನ್ನು ಧರಿಸಿ ಮನೆಗೆ ಹೋಗುತ್ತಿದ್ದನಂತೆ ಜಾಣ ಶ್ರೀ ಕೃಷ್ಣ.