ಹೈದರಾಬಾದ್: ‘ನಾವು 16 ವಿಧದ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಯಾರು ಬೇಕಾದರೂ ಮಾತನಾಡಬಹುದು. ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು. ನಾನು ಸರ್ಕಾರದಿಂದ ಯಾವುದೇ ಹಣ ಪಡೆದಿಲ್ಲ. ಪ್ರಯೋಗಗಳನ್ನು ಸ್ವಂತ ಖರ್ಚಿನಲ್ಲಿಯೇ ನಡೆಸಿದ್ದೇವೆ.’
ಹೀಗೆಂದು ಹೇಳಿದ್ದು ಭಾರತ್ ಬಯೋಟೆಕ್ ಚೇರ್ಮನ್ ಮತ್ತು ಎಂಡಿ ಕೃಷ್ಣ ಎಲ್ಲಾ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಲಸಿಕೆ ಖರೀದಿ ಮಾಡಲಿ ಎಂದು ಬಯಸುವುದಿಲ್ಲ. ಕೊರೊನಾದಿಂದ 120 ದಿನ ಕೊವ್ಯಾಕ್ಸಿನ್ ರಕ್ಷಣೆ ನೀಡಲಿದೆ. 12 ದೇಶಗಳಿಂದ ಬೇಡಿಕೆ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ನಮ್ಮ ಸಂಸ್ಥೆ ಪ್ರಯೋಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.
ಕೊವ್ಯಾಕ್ಸಿನ್ ಲಸಿಕೆ ಶೇಕಡ 100 ರಷ್ಟು ಸುರಕ್ಷಿತವಾಗಿದೆ. ಆಸ್ಟ್ರಾಜೆನಿಕಾ ಲಸಿಕೆಯಲ್ಲಿ ಪ್ಯಾರಾಸಿಟಮಲ್ ಇದೆ. ಇದರಿಂದ ಅಡ್ಡ ಪರಿಣಾಮಗಳು ಹೆಚ್ಚಿದೆ. ನಾನು ರಾಷ್ಟ್ರೀಯತೆಯನ್ನು ಮುಂದಿಟ್ಟು ಮಾತನಾಡುತ್ತಿಲ್ಲ. ನಾನು ಇಡೀ ವಿಶ್ವದ ಹಿತ ಬಯಸುವ ವಿಜ್ಞಾನಿ. ಪಾಕಿಸ್ತಾನ, ಬಾಂಗ್ಲಾದೇಶಗಳಿಗೆ ಲಸಿಕೆಗಳನ್ನು ವಿತರಿಸಿದ್ದೇವೆ. ಪಾಕಿಸ್ತಾನದ ಮಕ್ಕಳಿಗೆ ಲಸಿಕೆ ವಿತರಿಸಿ ಸಹಾಯ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.