ಬಾಗಲಕೋಟೆ: ರಾಜ್ಯದಲ್ಲಿ ಮಳೆ ಅಬ್ಬರ ಜೊರಾಗಿದ್ದು, ನದಿ, ಹಳ್ಳಕೊಳ್ಳಗಳು ಅಪಾಯದ ಮಟ್ಟಮೀರಿ ಹರಿಯುತ್ತಿವೆ. ಹಲವೆಡೆ ಸೇತುವೆಗಳು ಜಲಾವೃತಗೊಂಡಿವೆ. ಇಂತಹ ಸಂದರ್ಭಗಳಲ್ಲಿ ಹಲವರು ನದಿಗಳಿಗೆ ಇಳಿದು, ತುಂಬಿ ಹರಿಯುತ್ತಿರುವ ಸೇತುವೆಗಳ ಮೇಲೆ ಸಂಚರಿಸಿ ಹುಚ್ಚಾಟವಾಡುತ್ತಿದ್ದಾರೆ. ಅಂತವರಿಗೆ ಲಾಠಿ ರುಚಿ ತೋರಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಅನಗತ್ಯವಾಗಿ ನದಿಗಳಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸುವಂತೆ ಜಿಲ್ಲಾಧಿಕಾರಿಗಳು, ಎಸ್ ಪಿಗಳಿಗೆ ಸೂಚಿಸಿದ್ದೇನೆ. ರಾಜ್ಯದ ಜನತೆ ನಮ್ಮ ಬಗ್ಗೆ ತಪ್ಪು ತಿಳಿದುಕೊಂಡರೂ ಪರವಾಗಿಲ್ಲ. ಅಧಿಕಾರಿಗಳ ಮಾತು ಕೇಳದೇ ನದಿಗೆ ಇಳಿದರೆ ಲಾಠಿ ಪ್ರಯೋಗ ಮಾಡುವಂತೆ ಸೂಚಿಸಲಾಗಿದೆ ಎಂದರು.
ಮೀನು ಹಿಡಿಯುವುದು, ಕೃಷಿ ಚಟುವಟಿಕೆ ಎಂದು ಇಳಿಯುವುದು, ಸೆಲ್ಫಿಗಾಗಿ ನದಿ ಅಥವಾ ಹೊಳೆಗಳಿಗೆ ಇಳಿಯುವವರ ಮೇಲೆ ಲಾಠಿ ಪ್ರಯೋಗಕ್ಕೆ ಹೇಳಿದ್ದೇನೆ. ನಮ್ಮ ರಾಜ್ಯದಲ್ಲಿ ಪ್ರಾಣಹಾನಿಯಾಗುವುದಕ್ಕೆ ನಾವು ಬಿಡುವುದಿಲ್ಲ. ಒಳ್ಳೆ ಮಾತಿಗೆ ಗೌರವ ಕೊಡಲಿಲ್ಲ ಎಂದರೆ ಲಾಠಿ ಏಟು ನಿಶ್ಚಿತ ಎಂದು ಖಡಕ್ ಆಗಿ ಹೇಳಿದ್ದಾರೆ.