ಬೆಂಗಳೂರು: ರಾಜ್ಯಾದ್ಯಂತ ಸೆಪ್ಟೆಂಬರ್ 2 ರಿಂದ ಪೋಡಿ ದುರಸ್ತಿ ಅಭಿಯಾನ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ದಶಕಗಳ ಹಿಂದೆ ಮಂಜೂರಾಗಿದ್ದ ಸರ್ಕಾರಿ ಜಮೀನು ಸಹ, ಪೋಡಿ ದುರಸ್ತಿ ಆಗದೆ ಬಾಕಿ ಉಳಿದಿದೆ. ತೊಂದರೆ ಅನುಭವಿಸುತ್ತಿರುವ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಅಕ್ರಮ -ಸಕ್ರಮದಡಿ ಮಂಜೂರಾಗಿದ್ದರೂ, ದಶಕಗಳಿಂದ ಪೋಡಿ ದುರಸ್ತಿ ಬಾಕಿ ಇದ್ದು, ಲಕ್ಷಾಂತರ ರೈತರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಕೆಲವರ ಜಮೀನು ಮಾತ್ರ ಪೋಡಿ ದುರಸ್ತಿಯಾಗಿದೆ. ಇದರಿಂದ ಅನೇಕ ರೈತರು ತೊಂದರೆಗೊಳಗಾಗಿದ್ದಾರೆ. ಸೆಪ್ಟೆಂಬರ್ 2ರಿಂದ ಅಭಿಯಾನ ಮಾದರಿಯಲ್ಲಿ ಒಂದರಿಂದ ಐದು ನಮೂನೆ ಪೋಡಿ ದುರಸ್ತಿ ಕೆಲಸಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.
ಮಂಜೂರಾದ ಜಮೀನಿಗೆ ಪೋಡಿಯಾಗದ ಕಾರಣ ಆರ್.ಟಿ.ಸಿ.ಯೂ ಇಲ್ಲದಂತಾಗಿದ್ದು, ರೈತರಿಗೆ ತೊಂದರೆಯಾಗಿದೆ. ಕಚೇರಿಗಳಿಗೆ ಅಲೆದು ಸುಸ್ತಾಗಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯಂತೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ. ಸಮಸ್ಯೆ ಮುಕ್ತ ಪೋಡಿ ದುರಸ್ತಿಗೆ ನಮೂನೆ ಒಂದರಿಂದ ಐದರ ಕಡತಗಳನ್ನು ಡಿಜಿಟಲ್ ಕಡತಗಳನ್ನಾಗಿ ತಯಾರಿಸಲಾಗುತ್ತದೆ. ಡಿಜಿಟಲ್ ಆ್ಯಪ್ ನಿಂದ ಸರಳ ವೇಗ ಮತ್ತು ಪಾರದರ್ಶಕವಾಗಿ ಮೂಲ ಮಂಜೂರು ದಾಖಲೆ ಸುರಕ್ಷಿತವಾಗಿಡಬಹುದು ಎಂದು ಹೇಳಲಾಗಿದೆ.