ಬೆಂಗಳೂರು: ಮುಂದಿನ ಎಂಟು ತಿಂಗಳಲ್ಲಿ 1202 ಸೇವೆಗಳು ಸಕಾಲದಲ್ಲಿ ಲಭ್ಯವಿರಲಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳೊಂದಿಗೆ ಸಕಾಲ ಯೋಜನೆಗೆ ಸಂಬಂಧಿಸಿದಂತೆ ಸಭೆ ನಡೆಸಿದ ಸಚಿವರು ಸಕಾಲ ಯೋಜನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ 1202 ಸೇವೆಗಳನ್ನು ಮುಂದಿನ ಎಂಟು ತಿಂಗಳಲ್ಲಿ ಜನಸಾಮಾನ್ಯರಿಗೆ ಆನ್ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಕಾಲ ಯೋಜನೆ 101 ಇಲಾಖೆಯ 1082 ಸೇವೆಗಳನ್ನು ಈಗಾಗಲೇ ಜನರಿಗೆ ಒದಗಿಸುತ್ತಿದ್ದು, ಹೊಸದಾಗಿ 120 ಸೇವೆಗಳನ್ನು ಸೇರಿಸಲು ತಿಳಿಸಿದ್ದಾರೆ. ಕೆಲವು ಸೇವೆಗಳು ಇನ್ನು ಪೇಪರ್ ಅಪ್ಲಿಕೇಶನ್ ಮೋಡ್ ನಲ್ಲಿದ್ದು, ಮುಂದಿನ ಎಂಟು ತಿಂಗಳಲ್ಲಿ ಎಲ್ಲಾ ಸೇವೆಗಳನ್ನು ಡಿಜಿಟಲೀಕರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಸಕಾಲ ಯೋಜನೆಯಡಿ 922 ನಾಗರಿಕ, 280 ಸಿಬ್ಬಂದಿ ಸೇವೆ ನೀಡುತ್ತಿದೆ. ಇವುಗಳಲ್ಲಿ 802 ಸೇವೆಗಳನ್ನು ಮಾತ್ರ ಸೇವಾ ಸಿಂಧು ಆನ್ಲೈನ್ ನಲ್ಲಿ ನೀಡುತ್ತಿದ್ದು, ಅರ್ಜೆಯಿಂದ ಸೇವೆಯವರೆಗೆ ಎಲ್ಲವನ್ನು ಡಿಜಿಟಲೀಕರಣಗೊಳಿಸಬೇಕು. ಎಲ್ಲವೂ ಆನ್ಲೈನ್ ನಲ್ಲಿ ದಾಖಲಾಗಬೇಕು. ಏಕಗವಾಕ್ಷಿ ಸೇವಾಸಿಂಧು ಪೋರ್ಟಲ್ ಮೂಲಕ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.