
ಮಂಗಳೂರು: ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಸರ್ಕಾರ ಚಿಂತನೆ ನಡೆಸಿದ್ದು, ಆರು ತಿಂಗಳು ಒಳಗೆ 1,500 ರಿಂದ 1700 ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಪಾರದರ್ಶಕವಾಗಿ ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ ನಡೆಯಲಿದ್ದು, ಜಿಲ್ಲಾಧಿಕಾರಿಗಳಿಗೆ ನೇಮಕಾತಿ ಅಧಿಕಾರ ನೀಡಲಾಗಿದೆ. ಸರ್ವೆ ಇಲಾಖೆಯಲ್ಲಿ 250 ಲೈಸೆನ್ಸ್ ಸರ್ವೆಯರ್ ಗಳನ್ನು ನೇಮಕ ಮಾಡಲಾಗುವುದು. ಜನರು ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸಲು ಆಡಳಿತದಲ್ಲಿ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.