ಬೆಳಗಾವಿ(ಸುವರ್ಣಸೌಧ): ರಾಜ್ಯದಲ್ಲಿ ಪೋಡಿ ಮುಕ್ತ ಗ್ರಾಮ ಅಭಿಯಾನ 5 ವರ್ಷಗಳಿಂದ ನಿಧಾನಗತಿಯಲ್ಲಿ ಸಾಗಿದ್ದು, ಇನ್ನೂ 4 ವರ್ಷದೊಳಗೆ ಪೋಡಿ ಮುಕ್ತ ಗ್ರಾಮಗಳ ನಿರ್ಮಾಣ ಮಾಡುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2015ರಲ್ಲಿ ಆರಂಭವಾದ ಪೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆಯಡಿ ಇದುವರೆಗೆ 16,630 ಗ್ರಾಮಗಳನ್ನು ಪೋಡಿ ಮುಕ್ತ ಮಾಡಿದ್ದು, ಬಾಕಿ ಇರುವ 14,085 ಗ್ರಾಮಗಳನ್ನು 4 ವರ್ಷದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು ಹೇಳಿದ್ದಾರೆ.
ಸರ್ವೆಯರ್ ಗಳ ಕೊರತೆ ನೀಗಿಸಲು 1800 ಪರವಾನಿಗೆ ಸರ್ವೆಯರ್, 364 ಸರ್ಕಾರಿ ಸರ್ವೇಯರ್ ಗಳ ನೇಮಕಾತಿಗೆ ನಿರ್ಧರಿಸಲಾಗಿದೆ. ಸಾರ್ವಜನಿಕರು ಅರ್ಜಿ ಸಲ್ಲಿಸುವವರೆಗೂ ಕಾಯದೆ ಅಧಿಕಾರಿಗಳೇ ಹೋಗಿ ಪೋಡಿ ಮಾಡಿಕೊಡಬೇಕೆಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.