ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸರಳವಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಕಂದಾಯ ಇಲಾಖೆ ನೇಮಿಸುವ ಸಿಬ್ಬಂದಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 898 ನಾಡಕಚೇರಿ, 7,000 ಸೇವಾ ಸಿಂಧು ಕಚೇರಿ, ಬೆಂಗಳೂರು ಒನ್, ಆನ್ಲೈನ್ ಹಾಗೂ ಆಪ್ ಮೂಲಕವೂ ಅರ್ಜಿ ಸ್ವೀಕರಿಸಲಾಗುತ್ತದೆ. 1.30 ಕೋಟಿ ಅರ್ಜಿ ಸಲ್ಲಿಕೆಯಾಗುವ ನಿರೀಕ್ಷೆ ಇದ್ದು, ಎರಡು ತಿಂಗಳಲ್ಲಿ ಇಷ್ಟೊಂದು ಅರ್ಜಿ ಸ್ವೀಕರಿಸಿ ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.
ಕಂದಾಯ ಇಲಾಖೆಯೊಂದಿಗೆ ಕೃಷಿ ಇಲಾಖೆ ಸೇವೆ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಫೀಲ್ಡ್ ಸಿಬ್ಬಂದಿಯನ್ನು ಅರ್ಜಿ ಸ್ವೀಕರಿಸುವ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತದೆ. ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ 78 ಲಕ್ಷ ಜನ ವಿವಿಧ ರೀತಿಯ ಪಿಂಚಣಿ ಪಡೆಯುತ್ತಿದ್ದು, ಅವರಿಗೂ ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ವಿಧವೆಯರು, ಹಿರಿಯ ನಾಗರಿಕರು ವಿಕಲಚೇತನರು, ಮಹಿಳೆಯರು, ತೃತೀಯ ಲಿಂಗಿಗಳಿಗೆ ಗೃಹಲಕ್ಷ್ಮಿ ಯೋಜನೆ, ಸೌಲಭ್ಯ ಸಿಗಲಿದೆ. 600 ರೂಪಾಯಿಯಿಂದ 1200 ರೂ.ವರೆಗೆ ಪಿಂಚಣಿ ಪಡೆಯುತ್ತಿರುವವರಿಗೆ ಇನ್ನು ಮುಂದೆ 2,600 ನಿಂದ 3200 ರೂ.ವರೆಗೆ ಸಹಾಯಧನ ಸಿಗಲಿದೆ ಎಂದು ಹೇಳಿದ್ದಾರೆ.