
ಬೆಂಗಳೂರು: ಎಲ್ಲಾ ತಾಲೂಕುಗಳನ್ನು ಸಮಿತಿ ರಚಿಸಲಾಗುವುದು. 8 ತಿಂಗಳಲ್ಲಿ ಜಮೀನು ಸಕ್ರಮಗೊಳಿಸಿಕೊಡಲಾಗುವುದು. ಅಕ್ರಮ ಕಡೆಗೆ ಡಿಜಿಟಲ್ ವ್ಯವಸ್ಥೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್ ಹುಕುಂ ಜಮೀನು ಸಕ್ರಮಕ್ಕೆ ಇದುವರೆಗೆ 9.29 ಲಕ್ಷ ಅರ್ಜಿ ಸಲ್ಲಿಸಿದ್ದಾರೆ. ಸಕ್ರಮೀಕರಣಗೊಳಿಸಲು ಪರಿಶೀಲನೆ ನಡೆಸಿದಾಗ ಹಲವು ಅಕ್ರಮಗಳು ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿಯೂ ಶೀಘ್ರವೇ ಬಗರ್ ಹುಕುಂ ಸಮಿತಿಗಳನ್ನು ರಚಿಸಿ ಮುಂದಿನ 8 ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಒಬ್ಬನೇ 25 ಅರ್ಜಿಗಳನ್ನು ಹಾಕಿರುವುದು, ಸಾಗುವಳಿ ಮಾಡದೆ ಇರುವವರು ಕೂಡ ಅರ್ಜಿ ಹಾಕಿರುವುದು ಸೇರಿದಂತೆ ಹಲವು ಲೋಪಗಳು ಕಂಡುಬಂದಿದೆ. ಹೀಗಾಗಿ ಅವುಗಳನ್ನು ಸರಿಪಡಿಸಲು ಬಗರ್ ಹುಕುಂ ಸಮಿತಿ ರಚಿಸಲಾಗುವುದು. ಅರ್ಹರನ್ನು ಗುರುತಿಸಿ ತಹಶೀಲ್ದಾರ್ ಜಮೀನು ಮಹಜರು ಮಾಡಿ ಸಾಗುವಳಿ ಖಾತ್ರಿಪಡಿಸಲಿದ್ದಾರೆ ಎಂದರು.
ಬಗರ್ ಹುಕುಂ ಸಮಿತಿ ಸಭೆಗಳನ್ನು ಗಣಕೀಕೃತಗೊಳಿಸಲಿದ್ದು, ಬಯೋಮೆಟ್ರಿಕ್ ಮೂಲಕ ಹಾಜರಾತಿ ಖಾತ್ರಿಪಡಿಸಲಾಗುವುದು. ಡಿಜಿಟಲೀಕರಣ ಆದರೆ ಅಕ್ರಮಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಸರ್ಕಾರವೇ ಪೋಡಿ ಸಮೇತ ಎಲ್ಲಾ ನೋಂದಣಿ ಮಾಡಿಕೊಡಲಿದೆ. ಸಾಗುವಳಿ ಚೀಟಿ ಡಿಜಟಲೀಕರಣ ಮಾಡಲಿದ್ದು, ಬಾರ್ ಕೋಡ್ ಇರಲಿದೆ. ಆಕ್ರಮ ತಡೆಗೆ ಇದರಿಂದ ಸಹಕಾರಿಯಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.