ಬೆಂಗಳೂರು: ಬರಪೀಡಿತ ಪ್ರದೇಶ ಘೋಷಣೆಗೆ ಇರುವ ಮಾನದಂಡ ಬದಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರವೇ ಪತ್ರ ಬರೆಯುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕರು ಬರಗಾಲ ಘೋಷಣೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಚಿವರು ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ವಾಡಿಕೆಗಿಂತ ಮುಂಗಾರು ಮಳೆ ಕಡಿಮೆಯಾಗಿದ್ದು, ಬರಪೀಡಿತ ಪ್ರದೇಶವೆಂದು ಘೋಷಿಸಲು ಇರುವ ಮಾನದಂಡ ಬದಲಾವಣೆಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ ಎಂದರು.
ಬರಗಾಲ ಘೋಷಣೆ ಸಂಬಂಧ ಕೇಂದ್ರ ಸರ್ಕಾರ 2016ರಲ್ಲಿ ರೂಪಿಸಿದ್ದ ಮಾನದಂಡಗಳನ್ನು 2020ರಲ್ಲಿ ಪರಿಷ್ಕರಣೆ ಮಾಡಿದೆ. ರಾಜ್ಯ ಸರ್ಕಾರ ಏಕಾಏಕಿ ಬರಗಾಲ ಘೋಷಣೆ ಮಾಡಲು ಅವಕಾಶವಿಲ್ಲ. ಕೇಂದ್ರದ ಮಾನದಂಡದ ಪ್ರಕಾರ ವಾಡಿಕೆ ಮಳೆಗಿಂತ ಶೇಕಡ 60ರಷ್ಟು ಮಳೆಯ ಕೊರತೆ ಆಗಿರಬೇಕು. ಕನಿಷ್ಠ 3 ವಾರ ಸತತ ಮಳೆ ಬಂದಿರಬಾರದು ಎಂದೆಲ್ಲಾ ಮಾನದಂಡಗಳಿದ್ದು, ಸಂಕಷ್ಟದಲ್ಲಿರುವ ಜನರ ಸಮಸ್ಯೆ ಪರಿಹರಿಸಲು ಮಾನದಂಡ ಬದಲಾಯಿಸಬೇಕು ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.