ಬೆಂಗಳೂರು: ರಾಜ್ಯದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಐವರು ಸಾವನ್ನಪ್ಪಿದ್ದಾರೆ. ವಿಜಯಪುರದಲ್ಲಿ ಮೂವರು ಮತ್ತು ಹಾಸನ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ವಿಜಯಪುರ:
ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಹರನಾಳ ಬಳಿ ನಡೆದಿದೆ. ಗೀತಾ ಬಡಗಿ(28), ಮಕ್ಕಳಾದ ಶ್ರವಣ್(6), ಶರಣ್(4) ನೀರು ಪಾಲಾದವರು ಎಂದು ಹೇಳಲಾಗಿದೆ. ಮೃತ ಗೀತಾ ಅವರ ತಂದೆ ರಾಮಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ.
ಮಕ್ಕಳ ಜೊತೆಗೆ ಕೃಷಿಹೊಂಡದ ಸಮೀಪ ಹೋಗಿದ್ದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಗಂಡನ ಜೊತೆಗೆ ಜಗಳವಾಡಿ ತವರು ಮನೆಗೆ ಬಂದಿದ್ದಾಗ ದುರ್ಘಟನೆ ನಡೆದಿದೆ. ಯಾಳವಾರ ಗ್ರಾಮದ ನಿವಾಸಿ ಶ್ರೀಶೈಲ ಜೊತೆಗೆ ಗೀತಾ ಮದುವೆಯಾಗಿತ್ತು. ತಾಯಿ, ಗಂಡು ಮಕ್ಕಳಿಬ್ಬರ ಶವಗಳನ್ನು ಸ್ಥಳೀಯರು ಹೊರಗೆ ತೆಗೆದಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹಾಸನ:
ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕಾನನಹಳ್ಳಿಯಲ್ಲಿ ಘಟನೆ ನಡೆದಿದೆ. ಅಜಿತ್(37) ಹಾಗೂ ಅಶೋಕ್(35) ನೀರು ಪಾಲಾದವರು. ಕೆರೆ ಬಳಿ ರಾತ್ರಿ ಅಶೋಕ್ ಮತ್ತು ಅಜಿತ್ ಪಾರ್ಟಿ ಮಾಡಿದ್ದರು. ಬೆಳಿಗ್ಗೆಯಾದರೂ ಯುವಕರು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಮತ್ತು ಗ್ರಾಮಸ್ಥರು ಯುವಕರಿಗಾಗಿ ಹುಡುಕಾಟ ನಡೆಸಿದ್ದರು. ಕೃಷಿ ಹೊಂಡದ ಸಮೀಪ ಚಪ್ಪಲಿ ಮತ್ತು ಮದ್ಯದ ಬಾಟಲ್ ಪತ್ತೆಯಾಗಿವೆ. ಕೃಷಿ ಹೊಂಡದಲ್ಲಿ ಹುಡುಕಾಡಿದಾಗ ಇಬ್ಬರ ಶವ ಪತ್ತೆಯಾಗಿದೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.