ಶಿವಮೊಗ್ಗ: ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ವಿವಿಧ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆ ಅನುಷ್ಠಾನಗೊಳಿಸಲಾಗುವುದು.
ಜಮೀನಿನಲ್ಲಿ ಬದು, ಕೃಷಿ ಹೊಂಡ, ಕೃಷಿ ಹೊಂಡದ ಸುತ್ತ ತಂತಿ ಬೇಲಿ, ಕೃಷಿ ಹೊಂಡಕ್ಕೆ ಪಾಲಿಥಿನ್ ಹೊದಿಕೆ, ಪಂಪ್ಸೆಟ್ ಮತ್ತು ಲಘು ನೀರಾವರಿ ಘಟಕಗಳನ್ನು ಅನುಷ್ಠಾನಗೊಳಿಸಲು ಸಹಾಯಧನ ನೀಡಲಾಗುವುದು.
ರೈತರು ಈ ಎಲ್ಲಾ ಘಟಕಗಳನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಬೇಕಿದೆ. ಸಾಮಾನ್ಯ ವರ್ಗದ ರೈತರಿಗೆ ಶೇಕಡ 80ರಷ್ಟು, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇಕಡ 90ರಷ್ಟು ಸಹಾಯಧನ ಕಲ್ಪಿಸಲು ಅವಕಾಶವಿದೆ.
ಆಸಕ್ತ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಪಾಸ್ಪೋರ್ಟ್ ಅಳತೆಯ ಫೋಟೋ, ಜಾತಿ ಪ್ರಮಾಣ ಪತ್ರ, ಪಹಣಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವಂತೆ ಸಹಾಯಕ ಕೃಷಿ ನಿರ್ದೇಶಕ ಎಸ್.ಟಿ. ರಮೇಶ್ ತಿಳಿಸಿದ್ದಾರೆ.