
ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ವಿಭಾಗದ ಒಟ್ಟು 76 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
ಏಪ್ರಿಲ್ 22 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಮೇ 21 ಕೊನೆಯ ದಿನವಾಗಿದೆ. ಅರ್ಹ ಪುರುಷ, ಮಹಿಳಾ, ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 6೦೦ ರೂಪಾಯಿ, 2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 300 ರೂ., ಮಾಜಿ ಸೈನಿಕರಿಗೆ 50 ರೂ. ಶುಲ್ಕವಿದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1, ವಿಶೇಷ ಚೇತನರಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಈ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದ್ದು, ಸಂದರ್ಶನ ಇರುವುದಿಲ್ಲ. ಕನ್ನಡ ಕಡ್ಡಾಯ ಭಾಷೆ ಪರೀಕ್ಷೆ ಜೊತೆ ಎರಡು ಪತ್ರಿಕೆಗಳ ಬಹು ಆಯ್ಕೆ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆ ಇರಲಿದೆ. ನಂತರ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಇರಲಿದ್ದು, ಮೆರಿಟ್ ಆಧಾರದ ಮೇಲೆ ಮೀಸಲಾತಿ ಅನ್ವಯ ಆಯ್ಕೆಪಟ್ಟಿ ಪ್ರಕಟಿಸಲಾಗುವುದು. ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ವಿವಿಧ ವರ್ಗದವರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.