
ಬೆಳಗಾವಿ: ಕಲ್ಯಾಣ ಕರ್ನಾಟಕ ಭಾಗದ 97 ಪಿಡಿಒ ಹುದ್ದೆಗಳ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದು, ಈ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ, ಪಿಡಿಒ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಮತ್ತು ಪ್ರಶ್ನೆಪತ್ರಿಕೆ ವಿತರಿಸಲು ವಿಳಂಬವಾಗಿಲ್ಲ. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಈಗಾಗಲೇ ಆಯೋಗದಲ್ಲಿ ಉಪ ಸಮಿತಿಯನ್ನು ರಚಿಸಲಾಗಿದ್ದು, ವರದಿ ಸ್ವೀಕೃತವಾದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.