ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ(KPSC) ವತಿಯಿಂದ ನಡೆಸಿದ್ದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಸಹಾಯಕ ನಿರ್ದೇಶಕರ ಹುದ್ದೆಗಳ ಅಭ್ಯರ್ಥಿಗಳಿಗೆ 8 ಕೃಪಾಂಕಗಳನ್ನು ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ನೀಡಿರುವ ಅತಿ ಹೆಚ್ಚು ಕೃಪಾಂಕ ಇದಾಗಿದೆ. ಬರೋಬ್ಬರಿ ಎಂಟು ಕೃಪಾಂಕಗಳನ್ನು ಕೆ.ಪಿ.ಎಸ್.ಸಿ. ನೀಡಿದೆ.
ಸೆ. 21ರಂದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಸಹಾಯಕ ನಿರ್ದೇಶಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಸರಿಯುತ್ತರಗಳನ್ನು ಪ್ರಕಟಿಸಿ ಸೆಪ್ಟೆಂಬರ್ 29 ರವರೆಗೆ ಆಕ್ಷೇಪಣೆ ಆಹ್ವಾನಿಸಲಾಗಿದ್ದು, ಸ್ವೀಕೃತ ದೂರು ಪರಿಶೀಲಿಸಿ ಅಂತಿಮವಾಗಿ ಪರಿಷ್ಕೃತ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ.
ಸಾಮಾನ್ಯ ಪತ್ರಿಕೆಯಲ್ಲಿ ಒಂದು ಕೃಪಾಂಕ ನೀಡಿದ್ದು, ಇನ್ನೆರಡು ಉತ್ತರ ಬದಲಾವಣೆ ಮಾಡಲಾಗಿದೆ. ಕಂಪ್ಯೂಟರ್ ಸೈನ್ಸ್ ನ ನಿರ್ದಿಷ್ಟ ಪತ್ರಿಕೆಯಲ್ಲಿ ಒಟ್ಟು 4 ಕೃಪಾಂಕ ನೀಡಲಾಗಿದೆ. ಒಂದು ಉತ್ತರ ಬದಲಾಗಿದೆ. ಇನ್ನೊಂದು ಪ್ರಶ್ನೆಗೆ ಪರ್ಯಾಯ ಉತ್ತರ ನೀಡಲಾಗಿದೆ. ಅರ್ಥಶಾಸ್ತ್ರದ ನಿರ್ದಿಷ್ಟ ಪತ್ರಿಕೆಯಲ್ಲಿ ಮೂರು ಕೃಪಾಕ ನೀಡಲಾಗಿದ್ದು, ಮೂರು ಉತ್ತರ ಬದಲಾಗಿವೆ. ಗಣಿತ ಪತ್ರಿಕೆಗೆ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗಿಲ್ಲ. ಪರಿಷ್ಕೃತ ಉತ್ತರಗಳ ನಂತರ ಯಾವುದೇ ಆಕ್ಷೇಪಣೆ ಪರಿಗಣಿಸುವುದಿಲ್ಲ ಎಂದು ಲೋಕಸೇವಾ ಆಯೋಗ ತಿಳಿಸಿದೆ.