ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದೆ.
ಡಿಸೆಂಬರ್ 29ರಂದು ಕೆಎಎಸ್ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಆ. 27ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಪ್ರಶ್ನೆ ಪತ್ರಿಕೆಗಳಲ್ಲಿ ಹಲವು ತಪ್ಪುಗಳು ಕಂಡುಬಂದಿದ್ದರಿಂದ ಅಭ್ಯರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪರ ಸಂಘಟನೆಗಳು ಕೂಡ ಮರು ಪರೀಕ್ಷೆಗೆ ಒತ್ತಾಯಿಸಿದ್ದವು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ತಿಂಗಳ ಒಳಗೆ ಮರು ಪರೀಕ್ಷೆ ನಡೆಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸೂಚನೆ ನೀಡಿದ್ದು, ಅಂತಿಮವಾಗಿ ದಿನಾಂಕ ನಿಗದಿಪಡಿಸಲಾಗಿದೆ.
2023-24ನೇ ಸಾಲಿನ ಗೆಜ಼ೆಟೆಡ್ ಪ್ರೊಬೆಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮರುಪರೀಕ್ಷೆಯನ್ನು ದಿ:29.12.2024ರಂದು ನಡೆಸಲು ನಿಗದಿಪಡಿಸಿ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸದರಿ ಪರೀಕ್ಷೆಗೆ ಎಲ್ಲಾ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿರುತ್ತದೆ.
ಸದರಿ ದಿನಾಂಕದಂದು ಯಾವುದೇ ಪರೀಕ್ಷೆಯು ನಿಗದಿ ಆಗದಿರುವ ಕುರಿತು ಪರಿಶೀಲಿಸಲಾಗಿದೆ. ಈ ತಿದ್ದುಪಡಿ ಅಧಿಸೂಚನೆ ಜಾರಿಯಾದ ನಂತರ ಇನ್ನಿತರೆ ಯಾವುದೇ ಪರೀಕ್ಷೆ ನಿಗದಿಯಾದಲ್ಲಿ ಅದಕ್ಕೆ ಆಯೋಗ ಹೊಣೆಯಾಗುವುದಿಲ್ಲ. ಯಾವುದೇ ಕಾರಣಕ್ಕೂ ಪರೀಕ್ಷೆ ಮುಂದೂಡುವುದಿಲ್ಲ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಡಾ. ರಾಕೇಶ್ ಕುಮಾರ್ ಕೆ. ತಿಳಿಸಿದ್ದಾರೆ.