ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 384 ಕೆಎಎಸ್ ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ಪೂರ್ವ ನಿಗದಿಯಂತೆ ಆಗಸ್ಟ್ 25 ರಂದೇ ನಡೆಯಲಿದೆ.
ಈಗಾಗಲೇ ಪೂರ್ವಭಾವಿ ಪರೀಕ್ಷೆ ದಿನಾಂಕವನ್ನು ಎರಡು ಬಾರಿ ಮರು ನಿಗದಿ ಮಾಡಿರುವ ಕಾರಣ ಮತ್ತೆ ದಿನಾಂಕ ಬದಲಾವಣೆ ಮಾಡದೆ ನಿಗದಿಪಡಿಸಿರುವಂತೆ ಆಗಸ್ಟ್ 25ರಂದೇ ಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ.
ಆಗಸ್ಟ್ 25ರಂದು ಐಬಿಪಿಎಸ್ ಪರೀಕ್ಷೆ ನಡೆಯುತ್ತಿರುವ ದಿನವೇ ಕೆಎಎಸ್ ಪರೀಕ್ಷೆ ನಡೆಸುವುದರಿಂದ ಎರಡು ಹುದ್ದೆಗಳಿಗೆ ಅರ್ಜಿ ಹಾಕಿದ ಹಲವು ಅಭ್ಯರ್ಥಿಗಳು ಒಂದು ಪರೀಕ್ಷೆಯಿಂದ ವಂಚಿತರಾಗುವ ಕಾರಣ ಮುಂದೂಡುವಂತೆ ಮನವಿ ಮಾಡಲಾಗಿತ್ತು.
ಯುಪಿಎಸ್ಸಿ, ಎಸ್.ಎಸ್.ಸಿ., ಕೆಇಎ ಸೇರಿ ವಿವಿಧ ನೇಮಕಾತಿ ಪ್ರಾಧಿಕಾರಗಳ ಪರೀಕ್ಷಾ ದಿನಾಂಕಗಳನ್ನು ಪರಿಶೀಲಿಸಿ ಮಾಹಿತಿ ಪಡೆದು ಈ ಪರೀಕ್ಷೆಯ ದಿನಾಂಕ ನಿಗದಿಪಡಿಸಲಾಗಿದೆ. ಆಗಸ್ಟ್ 25ಕ್ಕೆ ಪೂರ್ವಭಾವಿ ಪರೀಕ್ಷೆ ದಿನಾಂಕ ನಿಗದಿಪಡಿಸಿ ಜೂನ್ 27ರಂದು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿತ್ತು.