ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(KPSC) 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳಿಗೆ 2017 -2018ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ವಯಸ್ಸಿನ ನಿರ್ಬಂಧ ಇಲ್ಲದೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಕೋವಿಡ್ ಮೊದಲಾದ ಕಾರಣಗಳಿಂದ ಆರು ವರ್ಷಗಳಿಂದ ಕೆಎಎಸ್ ಹುದ್ದೆಗಳಿಗೆ ನೇಮಕಾತಿ ನಡೆದಿರಲಿಲ್ಲ. ಹೀಗಾಗಿ 2017 -2018 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದವರಿಗೆ ಈ ಬಾರಿ ವಿಶೇಷ ಅವಕಾಶ ನೀಡಬೇಕೆಂದು ಅಭ್ಯರ್ಥಿಗಳು ಮನವಿ ಮಾಡಿದ್ದ ಮೇರೆಗೆ ವಯಸ್ಸಿನ ನಿರ್ಬಂಧ ಇಲ್ಲದೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಿರುವ ಕಾರಣ ಅರ್ಜಿ ಸಲ್ಲಿಸಲು 15 ದಿನ ಕಾಲಾವಕಾಶ ನೀಡುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೂಚಿಸಿದೆ. ಸಂಪುಟದ ಘಟನೋತ್ತರ ಮಂಜೂರಾತಿ ಪಡೆಯುವ ಷರತ್ತಿನೊಂದಿಗೆ ಈ ಆದೇಶ ಒಳಪಟ್ಟಿದೆ. ಜುಲೈ 21ಕ್ಕೆ ಪೂರ್ವಭಾವಿ ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಿದ್ದು, ಈ ಆದೇಶದಿಂದ ವೇಳಾಪಟ್ಟಿಯಲ್ಲಿ ಮತ್ತೆ ಬದಲಾವಣೆಯಾಗುವ ಸಾಧ್ಯತೆ ಇದೆ.