
ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ಮರು ಪರೀಕ್ಷೆ ನಡೆಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಅಭ್ಯರ್ಥಿಗಳು, ಸಂಘಟನೆಗಳು, ಸಾಹಿತಿಗಳು, ಚಿಂತಕರು ಶುಕ್ರವಾರ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದಾರೆ. ಕರ್ನಾಟಕ ‘ಲೋಪಸೇವಾ’ ಆಯೋಗ ಎಂದು ಟೀಕಿಸಿದ್ದಾರೆ. ಕನ್ನಡ ನಾಡಿನ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುವ ಕರ್ನಾಟಕ ಲೋಕಸೇವಾ ಆಯೋಗ ಮೊದಲು ಕನ್ನಡದಲ್ಲಿ ಪತ್ರಿಕೆ ತಯಾರಿಸಿ ನಂತರ ಇಂಗ್ಲಿಷಷ್ ಗೆ ಅನುವಾದಿಸಬೇಕು. ಕನ್ನಡಿಗರ ಹಿತ ಕಾಯುವ ನಿಟ್ಟಿನಲ್ಲಿ ಕೆಪಿಎಸ್ಸಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು. ಮುಂದೆ ತಪ್ಪುಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಲಕ್ಷಾಂತರ ಅಭ್ಯರ್ಥಿಗಳು ಹಗಲು ರಾತ್ರಿ ಕಷ್ಟಪಟ್ಟು ಓದುತ್ತಾರೆ. ಆದರೆ ಪ್ರಶ್ನೆ ಪತ್ರಿಕೆ ನೋಡಿದರೆ ಆಘಾತವಾಗುತ್ತದೆ. ಮೊದಲು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನಂತರ ಇಂಗ್ಲಿಷ್ ಗೆ ಅನುವಾದಿಸಬೇಕೆಂದು ಚಿಂತಕ ಬಂಜೆಗೆರೆ ಜಯಪ್ರಕಾಶ್ ಒತ್ತಾಯಿಸಿದ್ದಾರೆ.
ಲೋಕಸೇವಾ ಆಯೋಗ ಇರುವುದೇ ಪ್ರಾದೇಶಿಕ ನುಡಿಯ ಸಂರಕ್ಷಣೆ, ಕನ್ನಡ ಭಾಷಿಕರ ಉದ್ಯೋಗಕ್ಕಾಗಿ. ಉದ್ದೇಶ ಅರ್ಥ ಮಾಡಿಕೊಂಡು ಪರೀಕ್ಷೆಯಲ್ಲಿ ಆದ ಲೋಪ ಸರಿಪಡಿಸಲು ಮರು ಪರೀಕ್ಷೆಯೇ ಉತ್ತಮ ಮಾರ್ಗವಾಗಿದೆ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಹೇಳಿದ್ದಾರೆ.
ವ್ಯವಸ್ಥೆಯೊಳಗೆ ನುಸುಳಿದ ಕನ್ನಡ ವಿರೋಧಿಗಳ ಬೇಜವಾಬ್ದಾರಿ ಜೊತೆಗೆ ಗುಪ್ತ ಅಜೆಂಡಾ ಇದೆ ಅನಿಸುತ್ತದೆ. ಕನ್ನಡಿಗರಿಗೆ ಆದ ಅನ್ಯಾಯ ತಡೆಯಲು ಮರು ಪರೀಕ್ಷೆ ನಡೆಸಬೇಕೆಂದು ಚಿತ್ರ ಸಾಹಿತ್ಯ ಕವಿರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಹಿತಿ ಕುಂ. ವೀರಭದ್ರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ಬಾರದ ಜನರಿಂದ ಪ್ರಶ್ನೆ ಪತ್ರಿಕೆ ಬರೆಸಿ ದೋಷಗಳನ್ನು ತುಂಬಿ ಕನ್ನಡಿಗರಿಗೆ ಮೋಸ ಮಾಡುವುದನ್ನು ಒಪ್ಪಲಾಗದು ಎಂದು ಹೇಳಿದ್ದಾರೆ.