ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ನಂತರ ಕರ್ನಾಟಕ ಲೋಕಸೇವಾ ಆಯೋಗ(KPSC) ಕೂಡ ನೇಮಕಾತಿ ಪರೀಕ್ಷೆಗೆ ಸಿಸಿ ಕ್ಯಾಮೆರಾ ಅಳವಡಿಸಿ ವೆಬ್ ಕಾಸ್ಟ್ ಮೂಲಕ ಲೈವ್ ನಿಗಾ ವಹಿಸಲು ಮುಂದಾಗಿದೆ.
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕರ ಹುದ್ದೆಗಳಿಗೆ ಜುಲೈ 28ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯ ಮೇಲ್ವಿಚಾರಣೆಯನ್ನು ವೆಬ್ ಕಾಸ್ಟ್ ಮೂಲಕ ಮೇಲ್ವಿಚಾರಣೆ ಮಾಡಲು ಟೆಂಡರ್ ಕರೆಯಲಾಗಿದೆ.
ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ:
ಪಂಚಾಯಿತಿ ಅಭಿವೃದ್ಧಿ ನೇಮಕಾತಿ ಪರೀಕ್ಷೆ ಸೇರಿದಂತೆ ವಿವಿಧ ಇಲಾಖೆಗಳ ನೇಮಕಾತಿ ಪರೀಕ್ಷೆಗಳ ಸಂಭವನೀಯ ವೇಳಾಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದೆ.
ಕಲ್ಯಾಣ ಕರ್ನಾಟಕ ವೃಂದದ 97 ಪಿಡಿಒ ಹುದ್ದೆಗಳಿಗೆ ನವೆಂಬರ್ 11 ಮತ್ತು ನವೆಂಬರ್ 17ರಂದು ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ, ಉಳಿಕೆ ಮೂಲ ವೃಂದದ 150 ಪಿಡಿಒ ಹುದ್ದೆಗಳಿಗೆ ಡಿಸೆಂಬರ್ 7 ಮತ್ತು 8ರಂದು ಕ್ರಮವಾಗಿ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು.
ಹಿಂದುಳಿದ ವರ್ಗಗಳ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕರು, ತಾಲೂಕು ಹಿಂದುಳಿದ ವರ್ಗಗಳ ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಸೆಪ್ಟೆಂಬರ್ 14, 15 ರಂದು ಕನ್ನಡ ಭಾಷಾ ಪರೀಕ್ಷೆ, ಸಾಮಾನ್ಯ ಪತ್ರಿಕೆ ಮತ್ತು ನಿರ್ದಿಷ್ಟ ಪತ್ರಿಕೆ ಪರೀಕ್ಷೆ ನಡೆಯಲಿದೆ. ಇದೇ ಇಲಾಖೆಯ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅಕ್ಟೋಬರ್ 19, 20 ರಂದು ಪರೀಕ್ಷೆ ನಡೆಯಲಿದೆ.