ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಹುದ್ದೆಗಳಿಗೆ ಇನ್ನು ಒಂದೇ ಬಾರಿ ಶೈಕ್ಷಣಿಕ ದಾಖಲೆ ಅಪ್ಲೋಡ್ ಮಾಡಿದರೆ ಸಾಕು. ಪ್ರತಿ ಪರೀಕ್ಷೆಗೂ ಶೈಕ್ಷಣಿಕ ದಾಖಲೆಗಳನ್ನು ಅಪ್ಲೋಡ್ ಮಾಡುವಾಗ ಅಗತ್ಯ ಇರುವುದಿಲ್ಲ.
ಕೆ.ಪಿ.ಎಸ್.ಸಿ. ಹುದ್ದೆಗಳಿಗೆ ಒಂದು ಬಾರಿ ನೋಂದಣಿ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಪ್ರತಿ ಸಲ ಪ್ರತಿ ಹುದ್ದೆಗೆ ಪ್ರತ್ಯೇಕ ಶೈಕ್ಷಣಿಕ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ. ಸೆಂಟರ್ ಆಫ್ ಇ ಗವರ್ನೆನ್ಸ್ ಮೂಲಕ ಕೆ.ಪಿ.ಎಸ್.ಸಿ. ಉದ್ಯೋಗ್ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಅಭ್ಯರ್ಥಿಗಳು ಒಂದು ಬಾರಿ ನೋಂದಣಿಗಾಗಿ ಪ್ರೊಫೈಲ್ ಸೃಜಿಸಿಕೊಂಡು ಶೈಕ್ಷಣಿಕ ಮತ್ತಿತರ ದಾಖಲೆ, ಅವುಗಳ ನಂಬರ್ ಅಪ್ಲೋಡ್ ಮಾಡಬೇಕು. ಮುಂದೆ ಮತ್ತೊಂದು ಹುದ್ದೆಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನಿರ್ದಿಷ್ಟ ಹುದ್ದೆಗೆ ಸಲ್ಲಿಸುವಾಗ ಕೇಳುವ ದಾಖಲೆ ಸಂಖ್ಯೆ ನೀಡಿದರೆ ಸಾಕು.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಪ್ರತಿಯೊಂದು ದಾಖಲೆಗೂ ನೋಂದಣಿ ಸಂಖ್ಯೆ ನೀಡಲಿದ್ದು, ಅದನ್ನು ದಾಖಲಿಸಿದರೆ ಸಾಕು ದಾಖಲೆಗಳನ್ನು ಮತ್ತೆ ಅಪ್ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ. ಜಾತಿ ಪ್ರಮಾಣ ಪತ್ರ ಸೇರಿ ಕೆಲವು ದಾಖಲೆಗಳಿಗೆ ನಿರ್ದಿಷ್ಟ ಅವಧಿ ಇರಲಿದ್ದು, ಅಂತಹ ದಾಖಲೆಗಳ ಅವಧಿ ಮುಗಿದ ನಂತರ ಹೊಸದಾಗಿ ಅಪ್ಲೋಡ್ ಮಾಡಬಹುದಾಗಿದೆ ಎಂದು ಹೇಳಲಾಗಿದೆ.
ಇದರಿಂದ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಪ್ರತಿಬಾರಿ ಅರ್ಜಿ ಸಲ್ಲಿಸುವಾಗ ಅಂಕಪಟ್ಟಿಗಳು, ಪ್ರಮಾಣ ಪತ್ರಗಳು, ದಾಖಲೆಗಳನ್ನು ಅಪ್ಲೋಡ್ ಮಾಡಬೇಕಿತ್ತು. ಈಗ ಅದರ ಅವಶ್ಯಕತೆ ಇರುವುದಿಲ್ಲ. ವ್ಯವಸ್ಥೆಯನ್ನು ಸರಳೀಕರಣಗೊಳಿಸಲು, ಸಮಯ ಉಳಿತಾಯ ಅಭ್ಯರ್ಥಿಗಳ ಅನುಕೂಲಕ್ಕಾಗಿ ಉದ್ಯೋಗ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಕೆ ವ್ಯವಸ್ಥೆಯನ್ನು ಸರಳಗೊಳಿಸಿದ್ದು, ಒಂದು ಬಾರಿ ನೋಂದಣಿ ಮಾಡಿ ದಾಖಲೆ ಅಪ್ಲೋಡ್ ಮಾಡಿದರೆ ಸಾಕು ಎಂದು ಹೇಳಲಾಗಿದೆ.