ಬೆಂಗಳೂರು: ಪಿ ಎಸ್ ಐ, ಪಿಡಬ್ಲುಡಿ, ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿ ಅಕ್ರಮದ ಬೆನ್ನಲ್ಲೇ ಕೆ ಪಿ ಎಸ್ ಸಿ ನೇಮಕಾತಿಯಲ್ಲಿಯೂ ಅಕ್ರಮ ಕೇಳಿಬಂದಿದ್ದು, ಲೆಕ್ಕ ಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆಯಲ್ಲಿ ಸಹಾಯಕ ನಿಯಂತ್ರಕ ನೇಮಕದಲ್ಲಿಯೂ ಅಕ್ರಮ ನಡೆದಿದ್ದು, ಅಭ್ಯರ್ಥಿಯೋರ್ವರು ಬೆಂಗಳೂರು ಪೊಲಿಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಅಭ್ಯರ್ಥಿ ವಿನ್ಸೆಂಟ್ ರೋಡ್ರಿಗಸ್ ಪೊಲಿಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿದ್ದಾರೆ.
ಲೆಕ್ಕ ಪರಿಶೋಧನೆ ಹಾಗೂ ಲೆಕ್ಕಪತ್ರ ಇಲಾಖೆ ಹುದ್ದೆ ನೇಮಕಾತಿ ಸಂದರ್ಶನದಲ್ಲಿ ಹೆಚ್ಚಿನ ಅಂಕ ನೀಡಲು ವಿನಯ್ ಕುಮಾರ್ ಎಂಬಾತ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. 2020ರ ಡಿಸೆಂಬರ್ ನಲ್ಲಿ ನಡೆದಿದ್ದ ಪರೀಕ್ಷೆ ನೇಮಕಾತಿ ಸಂದರ್ಶನದಲ್ಲಿ ಈ ಅಕ್ರಮ ನಡೆದಿದ್ದಾಗಿ ದೂರಿದ್ದಾರೆ.
ಆಯ್ಕೆಯಾದ 54 ಅಭ್ಯರ್ಥಿಗಳ ಬಗ್ಗೆ ಅನುಮಾನವಿದ್ದು, ಕೆಪಿಎಸ್ ಸಿ ನೇಮಕಾತಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.