alex Certify ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬೀಗ ಜಡಿದ ಅಧಿಕಾರಿಗಳು: ನಿಯಮ ಮೀರಿದ ಆಸ್ಪತ್ರೆಗಳಿಗೆ ವಾರ್ನಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬೀಗ ಜಡಿದ ಅಧಿಕಾರಿಗಳು: ನಿಯಮ ಮೀರಿದ ಆಸ್ಪತ್ರೆಗಳಿಗೆ ವಾರ್ನಿಂಗ್

ಬಳ್ಳಾರಿ: ಕೆಪಿಎಂಇ(ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ) ಅಡಿಯಲ್ಲಿ ನೋಂದಣಿ ಮಾಡಿಕೊಳ್ಳದೆ ಕಾನೂನು ಬಾಹಿರವಾಗಿ ನಗರದ ಸುಧಾಕ್ರಾಸ್ ಬಳಿ ನಡೆಸುತ್ತಿದ್ದ ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೇಲೆ ಶುಕ್ರವಾರ ದಿಢೀರ್ ದಾಳಿ ನಡೆಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ್ ನೇತೃತ್ವದ ತಂಡ ಆಸ್ಪತ್ರೆಯ ಬಾಗೀಲು ಮುಚ್ಚಿ ಕೀ ಹಾಕಿ ಸೀಜ್ ಮಾಡಿದೆ.

ಡಿಹೆಚ್‍ಒ ಜನಾರ್ಧನ್ ನೇತೃತ್ವದ ತಂಡವು ಶುಕ್ರವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿದೆ. ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ವಿವಿಧ ರೀತಿಯ ಚಿಕಿತ್ಸೆಗಳು,ಶಸ್ತ್ರಚಿಕಿತ್ಸಾ ವಿಭಾಗ, ಐಸಿಯು ವಿಭಾಗ, ಒಳರೋಗಿಗಳ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳನ್ನು ಪರಿಶೀಲಿಸಿದೆ.

ಕೆಪಿಎಂಇ ಕಾಯ್ದೆ ಅಡಿ ನೋಂದಣಿ ಮಾಡಿಕೊಂಡ ಪರವಾನಿಗೆ ಪತ್ರ, ವೈದ್ಯರ ವಿವರ, ಯಾವ್ಯಾವ ಚಿಕಿತ್ಸೆಗೆ ಯಾವ್ಯಾವ ದರ ವಿಧಿಸಲಾಗುತ್ತದೆ ಎಂಬುದೆಲ್ಲವನ್ನು ಪರಿಶೀಲಿಸಿದಾಗ ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರದಿರುವುದು ಕಂಡುಬಂದಿತು. ಈ ಆಸ್ಪತ್ರೆಯ ಮಾಲೀಕರು ಮತ್ತು ವೈದ್ಯರು ಕೂಡ ಅಲ್ಲಿರದಿರುವುದು ಕಂಡುಬಂದಿತು. ಸ್ಥಳದಲ್ಲಿದ್ದ ಲ್ಯಾಬ್‍ಟೆಕ್ನಿಶಿಯನ್ ಅವರು ಬೇರೆಡೆಯಿಂದ ವೈದ್ಯರು ಮತ್ತು ಸರ್ಜನ್‍ಗಳು ಬಂದು ಚಿಕಿತ್ಸೆ ನೀಡಿ ಹೋಗುತ್ತಾರೆ ಎಂದು ತಿಳಿಸಿದರು.

ನಂತರ ಡಿಹೆಚ್‍ಒ ಅವರು ಒಳರೋಗಿಗಳಾಗಿ ದಾಖಲಾಗಿರುವ ರೋಗಿಗಳನ್ನು ಮಾತನಾಡಿಸಿ ಅವರು ಪಡೆದುಕೊಂಡಿರುವ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಅಷ್ಟರಲ್ಲಿಯೇ ಸ್ಥಳಕ್ಕಾಗಮಿಸಿದ ಆಸ್ಪತ್ರೆಯ ಮಾಲೀಕರು, ಎಂಟು ತಿಂಗಳಿಂದ ಆಸ್ಪತ್ರೆಯನ್ನು ನಡೆಸುತ್ತಿದ್ದೇವೆ. ಕೆಪಿಎಂಇ ಅಡಿ ನೋಂದಣಿ ಮಾಡುವುದಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಸಿದ್ದಪಡಿಸಲಾಗಿದ್ದು, ಶೀಘ್ರ ಪಡೆದುಕೊಳ್ಳುತ್ತೇವೆ ಅಂತ ತಿಳಿಸಿದ್ದಾರೆ.

ಎಲ್ಲ ರೀತಿಯ ಅನುಮತಿ ಪಡೆದುಕೊಂಡೇ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು. ಈ ರೀತಿ ನಡೆಸುವುದು ತಪ್ಪು ಎಂದು ಹೇಳಿದ ಡಿಹೆಚ್‍ಒ ಡಾ.ಜನಾರ್ಧನ್ ಅವರು ತಮ್ಮ ಆಸ್ಪತ್ರೆಯನ್ನು ಸೀಜ್ ಮಾಡಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ನಂತರ ಕೆಪಿಎಂಇ ಕಾಯ್ದೆ ಅನುಸಾರ ಕ್ರಮವಹಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನಕುಮಾರಿ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಅನಿಲಕುಮಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೀಜ್ ಮಾಡುವುದಕ್ಕೆ ಸಂಬಂಧಿಸಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಗಳಿಗೆ ಜಿಲ್ಲಾ ಸರ್ಕಾಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಯಿತು. ಆಸ್ಪತ್ರೆ ಸೀಜ್ ಮಾಡಿ ಆಸ್ಪತ್ರೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ತೆಗೆದುಕೊಂಡು ಹೋದರು.

ವೈದ್ಯರಿಲ್ಲದ ಆಸ್ಪತ್ರೆ:

ಈ ಆಸ್ಪತ್ರೆಯಲ್ಲಿ ಸರಿಯಾಗಿ ವೈದ್ಯರೇ ಇಲ್ಲ. ಡಿಹೆಚ್‍ಒ ನೇತೃತ್ವದ ತಂಡ ಭೇಟಿ ನೀಡಿದ ಸಮಯದಲ್ಲಿ ಯಾವುದೇ ವೈದ್ಯರು ಕಾಣಿಸಿಕೊಳ್ಳಲಿಲ್ಲ. ಬದಲಾಗಿ ಆಸ್ಪತ್ರೆಯ ಸಿಬ್ಬಂದಿಯೇ ರೋಗಿಗಳಿಗೆ ವೈದ್ಯರಂತೆ ಕಾಣುತ್ತಿದ್ದರು. ದಾಖಲಾಗಿದ್ದ ರೋಗಿಗಳಿಗೆ ಸರಿಯಾದ ಚಿಕಿತ್ಸೆಯೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೊರಗಡೆ ಲ್ಯಾಬ್ ರೂಮ್ ಎಂದು ದೊಡ್ಡದಾದ ಅಕ್ಷರಗಳಿಂದ ಬರೆದಿದ್ದರು. ಆದರೆ, ಆ ಕೊಠಡಿಯ ತುಂಬಾ ಆಸ್ಪತ್ರೆ ಸ್ವಚ್ಛಗೊಳಿಸಲು ಉಪಯೋಗಿಸುವ ವಸ್ತುಗಳಿಂದ ಆ ಲ್ಯಾಬ್ ರೂಮ್ ತುಂಬಿ ಹೋಗಿತ್ತು. ಅದರಲ್ಲಿ ರೋಗಿಗಳಿಗೆ ಉಪಯೋಗವಾಗುವ ಒಂದೂ ವಸ್ತುವೂ ಕೂಡ ಕಾಣಲಿಲ್ಲವೆನ್ನಲಾಗಿದೆ.

ದಾಳಿ ನಡೆಸಿ ಸೀಜ್ ಪ್ರಕ್ರಿಯೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿಹೆಚ್‍ಒ ಡಾ.ಜನಾರ್ಧನ್ ಅವರು, ಜಿಲ್ಲೆಯಲ್ಲಿ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಹಲವು ಆಸ್ಪತ್ರೆಗಳನ್ನು ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಈ ಪರಿಶೀಲನೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 726 ಆಸ್ಪತ್ರೆಗಳು ಈಗಾಗಲೇ ಕೆಪಿಎಂಇ ಅಡಿಯಲ್ಲಿ ನೋಂದಣಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದು, 20 ರಿಂದ 30 ಆಸ್ಪತ್ರೆಗಳು ಕಾನೂನು ಬಾಹಿರವಾಗಿ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಶೀಘ್ರದಲ್ಲಿಯೇ ಅವರು ಕೆಪಿಎಂಇ ಅಡಿ ನೋಂದಣಿ ಮಾಡಿಕೊಳ್ಳದಿದ್ದಲ್ಲಿ ಅವುಗಳ ಮೇಲೆ ದಾಳಿ ನಡೆಸಿ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...