ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಅತ್ಯುತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳು ಸಹ ಕಾಂಗ್ರೆಸ್ ನಾಯಕರಲ್ಲಿ ಹುಮ್ಮಸ್ಸು ತಂದಿದ್ದು, ಈ ಬಾರಿ ತಮಗೆ ಬಹುಮತ ಬರುವುದು ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ.
ಮುಖ್ಯಮಂತ್ರಿ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಗ್ಗಟ್ಟು ಪ್ರದರ್ಶಿಸಿದ್ದು, ಮಂಗಳವಾರದಂದು ನಾಡ ದೇವತೆ ಚಾಮುಂಡೇಶ್ವರಿಗೆ ಒಟ್ಟಿಗೆ ಪೂಜೆ ಸಲ್ಲಿಸಿದ್ದಾರೆ. ಇದರ ಮಧ್ಯೆ ಡಿ.ಕೆ. ಶಿವಕುಮಾರ್ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಗೆ ಪೂಜೆ ಸಲ್ಲಿಸುವ ಮೂಲಕ ಮತದಾನಕ್ಕೆ ತೆರಳುವ ಮುನ್ನ ಸಿಲಿಂಡರ್ ಬೆಲೆ ನೆನಪಿರಲಿ ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ.
ಪೂಜೆ ಬಳಿಕ ಮಾತನಾಡಿರುವ ಡಿ.ಕೆ. ಶಿವಕುಮಾರ್, 2014ರ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮತದಾನಕ್ಕೆ ಮೊದಲು ಅಡುಗೆ ಸಿಲಿಂಡರ್ ಗೆ ನಮಸ್ಕರಿಸಿ ಮತದಾನ ಮಾಡಲು ಕರೆ ನೀಡಿದ್ದರು. ಅವರ ಮಾರ್ಗದರ್ಶನಂತೆ ಈ ಬಾರಿಯ ಚುನಾವಣೆಯಲ್ಲಿ ಕೂಡಾ ಸಿಲಿಂಡರ್ ಬೆಲೆಯನ್ನು ನೆನಪಿಸಿಕೊಳ್ಳಲಿ ಎಂದು ಹೇಳಿದ್ದಾರೆ.