ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೋರಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್ ಅರ್ಜಿ ಸಲ್ಲಿಸಲಿದ್ದು, ಕೆಪಿಸಿಸಿಗೆ ನೀಡಬೇಕಿರುವ 2 ಲಕ್ಷ ರೂ.ಗಳನ್ನು ಬಡ ಕುಟುಂಬದ ವಿಕಲಚೇತನ ಯುವತಿ ಮದುವೆಗೆ ನೀಡಲು ಮುಂದಾಗಿದ್ದಾರೆ.
ಈ ನಿರ್ಧಾರಕ್ಕೆ ಕೆಪಿಸಿಸಿ ಸಹಮತ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಚನ್ನಗಿರಿ ತಾಲೂಕು ಬೆಳಗೆರೆ ಗ್ರಾಮದ ರಂಗಪ್ಪ, ಯಲ್ಲಮ್ಮ ದಂಪತಿಯ 7 ಜನ ಹೆಣ್ಣು ಮಕ್ಕಳಲ್ಲಿ ಐದು ಮಂದಿಗೆ ವಾಕ್ ಮತ್ತು ಶ್ರವಣ ದೋಷವಿದೆ. ನಾಲ್ವರು ಹೆಣ್ಣು ಮಕ್ಕಳ ಮದುವೆಯಾಗಿದ್ದು, ರಂಗಪ್ಪ ಇತ್ತೀಚೆಗೆ ನಿಧನರಾಗಿದ್ದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಅವರ ಪುತ್ರಿ ಕೆಂಚಮ್ಮ ಅವರ ಮದುವೆ ನಿಶ್ಚಯವಾಗಿದ್ದು, ಹಣ ಹೊಂದಿಸಲಾಗದೆ ಮದುವೆಯನ್ನು ಮುಂದೂಡಲಾಗುತ್ತಿದೆ.
ಈ ಮಾಹಿತಿ ತಿಳಿದು ತೇಜಸ್ವಿ ಪಟೇಲ್ ಅವರು ಕೆಪಿಸಿಸಿಗೆ ಅರ್ಜಿಯೊಂದಿಗೆ ಸಲ್ಲಿಸಬೇಕಿರುವ 2 ಲಕ್ಷ ರೂ.ಗಳನ್ನು ಬಡ ಕುಟುಂಬದವರಿಗೆ ನೀಡಲು ಚಿಂತನೆ ನಡೆಸಿದ್ದಾರೆ. ಇದಕ್ಕೆ ಕೆಪಿಸಿಸಿ ಒಪ್ಪಿಗೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಕೆಪಿಸಿಸಿ ಒಪ್ಪಿದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಂದ ಅಧಿಕೃತವಾಗಿ ಕೆಂಚಮ್ಮ ಮದುವೆಗೆ ಅವರ ಕುಟುಂಬಕ್ಕೆ ಡಿಡಿ ಹಸ್ತಾಂತರ ಮಾಡಲಾಗುವುದು. ಇಲ್ಲದಿದ್ದರೆ ಮದುವೆಗೆ ತೊಂದರೆಯಾಗದಂತೆ ತಮ್ಮ ಸ್ನೇಹ ಬಳಗದಿಂದ ಎರಡು ಲಕ್ಷ ರೂಪಾಯಿ ಸಂಗ್ರಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.