ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲು ಕಾರ್ಯತಂತ್ರ ರೂಪಿಸುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರು ರಾಜ್ಯ ನಾಯಕರನ್ನು ಹೊರಗಿಟ್ಟು ವಿಭಾಗ ಮಟ್ಟದ ಸಭೆ ನಡೆಸಿದ್ದಾರೆ. ಈ ಮೂಲಕ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಹೊಸ ಹುಮ್ಮಸ್ಸು ತುಂಬುವ ಕೆಲಸ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬದಿಗಿಟ್ಟು ಜಿಲ್ಲಾ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗಿದೆ. ತುಮಕೂರಿನಲ್ಲಿ ಚಿತ್ರದುರ್ಗ, ತುಮಕೂರು, ದಾವಣಗೆರೆ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಮುಖಂಡರ ಸಭೆ ನಡೆಸಲಾಗಿದೆ.
ಪಕ್ಷದ ಜಿಲ್ಲಾ ಘಟಕಗಳಲ್ಲಿನ ವಿದ್ಯಮಾನ ಮತ್ತು ರಾಜ್ಯ ನಾಯಕರ ಸ್ಪಂದನೆಯ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಸುರ್ಜೆವಾಲ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ರಾಜ್ಯ ನಾಯಕರನ್ನು ಬದಿಗಿಟ್ಟು ಸಭೆ ನಡೆಸಿದ್ದಾರೆ. ಜಿಲ್ಲಾ ಮುಖಂಡರು ಸುರ್ಜೆವಾಲ ಎದುರು ಪಕ್ಷದಲ್ಲಿನ ಬೆಳವಣಿಗೆ ಮತ್ತು ಸಂಘಟನೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.