
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭಾನುವಾರ ವಿಧಾನ ಪರಿಷತ್ ಬಿಜೆಪಿ ಸದಸ್ಯ ಕೆ.ಪಿ. ನಂಜುಂಡಿ ಜೊತೆ ಉಪಾಹಾರ ಕೂಟದಲ್ಲಿ ಜೊತೆಯಾಗಿ ಕುತೂಹಲ ಕೆರಳಿಸಿದ್ದಾರೆ.
ವಿಶ್ವಕರ್ಮ ಸಮುದಾಯದ ಪ್ರಭಾವಿ ನಾಯಕರಾಗಿರುವ ಕೆ.ಪಿ. ನಂಜುಂಡಿ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದರು. ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಕೆ.ಪಿ. ನಂಜುಂಡಿ ಬಿಜೆಪಿ ಸೇರಿದ್ದು, ಮಾಜಿ ಸಿಎಂ ಯಡಿಯೂರಪ್ಪ ನಂಜುಂಡಿ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಇದೇ ಜೂನ್ ನಲ್ಲಿ ಅವರ ವಿಧಾನ ಪರಿಷತ್ ಸದಸ್ಯತ್ವ ಅವಧಿ ಪೂರ್ಣಗೊಳ್ಳಲಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರ್ಯತಂತ್ರ ರೂಪಿಸಿರುವ ಡಿ.ಕೆ. ಶಿವಕುಮಾರ್ ಅನೇಕ ಮುಖಂಡರನ್ನು ಕಾಂಗ್ರೆಸ್ ಗೆ ಸೆಳೆಯುತ್ತಿದ್ದು, ಇದೀಗ ಕೆ.ಪಿ. ನಂಜುಂಡಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಅವರನ್ನು ಮತ್ತೆ ಕಾಂಗ್ರೆಸ್ ನತ್ತ ಸೆಳೆಯಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.