ಕೇರಳದ ಕೋಝಿಕ್ಕೋಡ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ಕೂಟರ್ ಗೆ ನಕಲಿ ನಂಬರ್ ಪ್ಲೇಟ್ ಬಳಸಿ ಹಲವಾರು ಟ್ರಾಫಿಕ್ ಅಪರಾಧಗಳನ್ನು ಎಸಗಿದ್ದು, ಆ ನಂಬರ್ ಹೊಂದಿದ್ದ ವಾಹನದ ಮಾಲೀಕ ಈ ನೋಟಿಸ್ ಗಳನ್ನು ಸ್ವೀಕರಿಸಿದ್ದ. ಆದರೆ ತಾನು ಯಾವುದೇ ನಿಯಮ ಉಲ್ಲಂಘಿಸದಿದ್ದರೂ ದಂಡ ವಿಧಿಸುತ್ತಿರುವುದಕ್ಕೆ ಕಂಗಾಲಾದ ಆತ ಪೊಲೀಸರಿಗೆ ದೂರು ನೀಡಿದ ವೇಳೆ ಅಸಲಿ ಸಂಗತಿ ಬಹಿರಂಗವಾಗಿದೆ.
ಪಾಲಕ್ಕಾಡ್ ಮೂಲದ ಮೊಹಮ್ಮದ್ ನೀಡಿದ ದೂರಿನ ಆಧಾರದ ಮೇಲೆ ಕೋಝಿಕ್ಕೋಡ್‌ನ ಅವಲಾ ಮೂಲದ ಲಿಮೇಶ್‌ನನ್ನು ಪೆರಿಂಗಾಪ್ರಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಲಿಮೇಶ್ ಕಳೆದ ನಾಲ್ಕು ವರ್ಷಗಳಿಂದ ಮೊಹಮ್ಮದ್ ಅವರ ವಾಹನ ಸಂಖ್ಯೆಯನ್ನು ಬಳಸುತ್ತಿದ್ದ.
ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದಕ್ಕಾಗಿ ಲಿಮೇಶ್‌ಗೆ ಮೋಟಾರು ವಾಹನ ಇಲಾಖೆಯಿಂದ ಪದೇ ಪದೇ ದಂಡ ವಿಧಿಸಲಾಗಿದ್ದು, ಇದು ಆ ನಂಬರ್ ಹೊಂದಿದ್ದ ಮೊಹಮ್ಮದ್ ಅವರಿಗೆ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದು, ದಂಡದ ಮೊತ್ತ 18,000 ರೂ. ವರೆಗೂ ತಲುಪಿತ್ತು. ಮೊಹಮ್ಮದ್ ದೂರು ನೀಡಿದ ಬಳಿಕ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಕೋಝಿಕ್ಕೋಡ್‌ನ ಪನ್ನಿಮುಕ್ಕು ಪ್ರದೇಶದಲ್ಲಿ ಹೆಚ್ಚಿನ ಉಲ್ಲಂಘನೆಗಳು ನಡೆದಿರುವುದು ಕಂಡುಬಂದಿತ್ತು.
ತನಿಖೆಯ ನಂತರ, ಪನ್ನಿಮುಕ್ಕು ಬಳಿ ಲಿಮೇಶ್ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಟ್ರಾಫಿಕ್ ಕ್ಯಾಮೆರಾ ದೃಶ್ಯವನ್ನು ಸೆರೆಹಿಡಿದಿತ್ತು. ಆ ಬಳಿಕ ಆತನನ್ನು ಬಂಧಿಸಲಾಗಿದ್ದು, ಸ್ಕೂಟರ್ ಖರೀದಿಸಿದ ನಂತರ ನೋಂದಣಿ ಮಾಡದೆ ನಕಲಿ ನಂಬರ್ ಪ್ಲೇಟ್ ಬಳಸಿದ್ದಾಗಿ ಲಿಮೇಶ್ ತಪ್ಪೊಪ್ಪಿಕೊಂಡಿದ್ದಾನೆ.