ಚಿತ್ರದುರ್ಗ: ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಚಿತ್ರದುರ್ಗದ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಚಿತ್ರ ವಿತರಕ ಖಾಜಾಪೀರ್ ಅವರ ದೂರು ಆಧರಿಸಿ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ನಿರ್ಮಾಪಕ ಸೂರಪ್ಪ ಬಾಬು ಒಪ್ಪದಂದಂತೆ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿಲ್ಲ. ಮುಂಗಡವಾಗಿ ನೀಡಿದ್ದ ಹಣವನ್ನು ಕೊಡದೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ವಿತರಕ ಖಾಜಾಪೀರ್ ದೂರು ಆಧರಿಸಿ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಮುಂಗಡ ನೀಡಿದ ಹಣವನ್ನು ವಾಪಸ್ ಕೊಡದೆ ಸೂರಪ್ಪಬಾಬು ಕೊಲೆ ಬೆದರಿಕೆ ಹಾಕಿರುವುದಾಗಿ ಚಿತ್ರದುರ್ಗದ ಸಿನಿಮಾ ವಿತರಕ ಖಾಜಾಪೀರ್ ಆರೋಪಿಸಿದ್ದಾರೆ. ಖಾಜಾಪೀರ್ ಅವರು ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳ ವಿತರಣೆ ಹಕ್ಕು ಪಡೆದಿದ್ದರು. ಸೂರಪ್ಪ ಬಾಬು ಅವರ ರಾಮ್ ಬಾಬು ಫಿಲಮ್ಸ್ ಗೆ 55 ಲಕ್ಷ ರೂಪಾಯಿಯನ್ನು ಆರ್ಟಿಜಿಎಸ್ ಮೂಲಕ ಸಂದಾಯ ಮಾಡಿದ್ದು, 5 ಲಕ್ಷ ರೂಪಾಯಿಯನ್ನು ನೇರವಾಗಿ ನೀಡಿದ್ದರೆನ್ನಲಾಗಿದೆ.
ಸಿನಿಮಾ ವಿತರಣೆಗಾಗಿ 1.90 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದು, ಸಿನಿಮಾದ ಬಿಡುಗಡೆಗೆ ಅವಕಾಶ ಕೊಡದೆ ಮತ್ತು ಕೊಟ್ಟ ಹಣವನ್ನು ಕೂಡ ವಾಪಸ್ ನೀಡದೆ ಸೂರಪ್ಪಬಾಬು ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಸಿನಿಮಾ ವಿತರಣೆಯನ್ನು ಜಾಕ್ ಮಂಜು ಅವರಿಗೆ ನೀಡಲಾಗಿದ್ದು, ಹಣ ವಾಪಸ್ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದು, ಚಿತ್ರದುರ್ಗ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಆಯುಧಪೂಜೆ ದಿನವಾದ ಅಕ್ಟೋಬರ್ 14 ರಂದು ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೆಲವು ವಿತರಕರು ಸಂಚು ಮಾಡಿದ್ದರಿಂದ ವಿತರಣೆ ಒಂದು ದಿನ ವಿಳಂಬವಾಗಿದೆ. ಸಂಚು ಮಾಡಿದ ವಿತರಕರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ.