
ಬೆಂಗಳೂರು: ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳ ಪಡಿತರ ಚೀಟಿದಾರರಿಗೆ ಜನವರಿ 1 ರಿಂದ 5 ಕೆಜಿ ಕುಚ್ಚಲಕ್ಕಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈ ಮೂಲಕ ಕರಾವಳಿ ಜನರ ಬಹುದಿನಗಳ ಬೇಡಿಕೆಯಂತೆ ಹೊಸ ವರ್ಷದ ಜನವರಿಯಿಂದ ಪಡಿತರ ವ್ಯವಸ್ಥೆಯಡಿ ಕುಚ್ಚಲಕ್ಕಿ ವಿತರಿಸಲಾಗುತ್ತದೆ ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಚ್ಚಲಕ್ಕಿ ತಯಾರಿಕೆಗೆ ಅಗತ್ಯವಾದ ಜಯಾ, ಎಮ್ಓ 4, ಜ್ಯೋತಿ ಮತ್ತು ಅಭಿಲಾಸ ತಳಿಯ ಭತ್ತವನ್ನು ಕ್ವಿಂಟಲ್ ಗೆ 2540 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು. ಇದಕ್ಕಾಗಿ 132 ಕೋಟಿ ರೂಪಾಯಿ ಭರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ.
ಕುಚ್ಚಲಕ್ಕಿ ತಯಾರಿಸಲು ಯೋಗ್ಯವಾದ ನಾಲ್ಕು ತಳಿಯ ಒಟ್ಟು 13 ಲಕ್ಷ ಕ್ವಿಂಟಲ್ ಭತ್ತ ಖರೀದಿಗೆ ಡಿಸೆಂಬರ್ 1 ರಿಂದ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಕರಾವಳಿ ಭಾಗದ ಶೇಕಡ 80 ರಷ್ಟು ಮಂದಿ ಕುಚ್ಚಲಕ್ಕಿ ಬಳಸುತ್ತಿದ್ದು, ಪಡಿತರದಲ್ಲಿ ಕುಚ್ಚಲಕ್ಕಿ ವಿತರಿಸಬೇಕೆಂಬ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಪಡಿತರದ ಮೂಲಕ ಕುಚ್ಚಲಕ್ಕಿ ವಿತರಿಸಲಾಗುವುದು ಎಂದು ಹೇಳಿದ್ದಾರೆ.