ರಾಜಸ್ಥಾನದ ಕೋಟಾದ ವಕೀಲರೊಬ್ಬರು ರಸ್ತೆ ಅಪಘಾತದಲ್ಲಿ ಸಿಲುಕಿದ ತನ್ನ ಪುತ್ರನನ್ನು ಸರ್ಕಾರೀ ಆಸ್ಪತ್ರೆಯ ಮೂರನೇ ಮಹಡಿಯಲ್ಲಿದ್ದ ಮೂಳೆ ರೋಗ ವಿಭಾಗಕ್ಕೆ ತಮ್ಮ ಸ್ಕೂಟರ್‌ನಲ್ಲೇ ಕರೆದೊಯ್ದಿದ್ದಾರೆ.
ವಕೀಲರ 15 ವರ್ಷದ ಪುತ್ರನಿಗೆ ರಸ್ತೆ ಅಫಘಾತದಲ್ಲಿ ಕಾಲಿನ ಮೂಳೆ ಮುರಿದಿದ್ದು, ಆತನನ್ನು ತಕ್ಷಣ ಎಂಬಿಎಸ್ ಸರ್ಕಾರೀ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಕೀಲಿಕೆಯ ಕರಿ ಕೋಟು ಧರಿಸಿರುವ ಮನೋಜ್ ಜೈನ್ ಸ್ಕೂಟರ್‌ನಲ್ಲಿ ತಮ್ಮ ಪುತ್ರನನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯ ಎಲೆವೇಟರ್ ಮೂಲಕ ಸ್ಕೂಟರ್ ಅನ್ನು ಮೂರನೇ ಮಹಡಿಗೆ ಏರಿಸಿದ ಈ ವಕೀಲ, ಅಲ್ಲಿನ ಸಿಬ್ಬಂದಿ ನೋಡ ನೋಡುತ್ತಲೇ ಮಗನನ್ನು ಮೂಳೆರೋಗದ ವಿಭಾಗದತ್ತ ಕೊಂಡೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಗಾಲಿಕುರ್ಚಿಗಳ ಕೊರತೆಯ ವಿಚಾರವಾಗಿ ಈ ವಕೀಲರು ತಮ್ಮದೇ ರೀತಿಯಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೂಡಲೇ ಪರಿಸ್ಥಿತಿಯನ್ನು ತಹಬದಿಗೆ ತಂದ ಆಸ್ಪತ್ರೆಯ ಆಡಳಿತ, ತಮ್ಮಲ್ಲಿಗೆ ಪ್ರತಿನಿತ್ಯ 3000 ರೋಗಿಗಳು ಬರುತ್ತಿದ್ದು, ಗಾಲಿಕುರ್ಚಿಗಳಿಗೆ ಅಭಾವವಿಲ್ಲ ಎಂದಿದ್ದಾರೆ.