
ದೀರ್ಘಾವಧಿ ಬದುಕಬೇಕೆಂಬ ಬಯಕೆಯಿಂದ ಅನೇಕರು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ತಾರೆ. ಸರಿಯಾದ ಆಹಾರ ಕ್ರಮಗಳನ್ನು ಪಾಲಿಸುತ್ತಾರೆ. ಕೊರಿಯಾದ ಜನರು ಅತಿ ಹೆಚ್ಚು ದೀರ್ಘಾಯುಷಿಗಳು. ಇಲ್ಲಿ ನೂರು ವರ್ಷ ಬದುಕುವವರ ಸಂಖ್ಯೆ ಹೇರಳವಾಗಿದೆ. ಇವರ ದೀರ್ಘಾಯುಷ್ಯದ ರಹಸ್ಯವೇನು ಅನ್ನೋದನ್ನು ತಿಳಿಯೋಣ.
ಕೊರಿಯನ್ನರ ಆರೋಗ್ಯ ಮತ್ತು ಸೌಂದರ್ಯದ ರಹಸ್ಯ!
ವಯಸ್ಸಾದ ನಂತರವೂ ಕೊರಿಯನ್ ಜನರು ಆರೋಗ್ಯವಾಗಿರುತ್ತಾರೆ, ಅವರ ಫಿಟ್ನೆಸ್ ಅದ್ಭುತ. ಅವರ ಮುಖದ ಮೇಲೆ ಸುಕ್ಕುಗಳು ತುಂಬಾ ಕಡಿಮೆಯಿರುತ್ತವೆ, ಯಾವಾಗಲೂ ಯಂಗ್ ಆಗಿ ಕಾಣುತ್ತಾರೆ.
ಕೊರಿಯನ್ನರ ದೀರ್ಘಾಯುಷ್ಯ ಮತ್ತು ಫಿಟ್‌ಲೈಫ್‌ಗೆ ಬಹುದೊಡ್ಡ ಕಾರಣವೆಂದರೆ ಅವರು ಸೇವಿಸುವ ಆಹಾರ. ಅಲ್ಲಿನ ಜನರು ವಿಶೇಷ ರೀತಿಯ ಕೊರಿಯನ್ ಟೆಂಪಲ್ ಪಾಕಪದ್ಧತಿಯನ್ನು ಅನುಸರಿಸುತ್ತಾರೆ. ಇದರಿಂದಾಗಿ ಸಂಪೂರ್ಣ ಫಿಟ್ ಆಗಿರುತ್ತಾರೆ.
ಕೊರಿಯನ್ ಜನರು ವಿಶೇಷವಾಗಿ ಸುನ್ಸಿಕ್ ಎಂಬ ಆಹಾರವನ್ನು ಸೇವಿಸುತ್ತಾರೆ. ಸುನ್ಸಿಕ್, ದಕ್ಷಿಣ ಕೊರಿಯಾದ ಬೌದ್ಧ ದೇವಾಲಯಗಳಲ್ಲಿ ಬಡಿಸುವ ಸಾಂಪ್ರದಾಯಿಕ ಭಕ್ಷ್ಯ. ಸುನ್ಸಿಕ್ ಅನ್ನು ಸಸ್ಯ ಆಧಾರಿತ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಕಾಲೋಚಿತ ತರಕಾರಿಗಳು, ಧಾನ್ಯಗಳು, ದ್ವಿದಳ ಧಾನ್ಯಗಳು, ಕಾಡು ಗಿಡಮೂಲಿಕೆಗಳು ಮತ್ತು ಅಣಬೆಗಳನ್ನು ಇದು ಒಳಗೊಂಡಿರುತ್ತದೆ. ಇದರಲ್ಲಿ ಮಾಂಸ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸಲಾಗುವುದಿಲ್ಲ.
ಕೊರಿಯಾದ ದೇವಾಲಯಗಳಲ್ಲಿ ಈ ತಿನಿಸನ್ನು ಐದು ಬಣ್ಣಗಳಲ್ಲಿ ತಯಾರಿಸಲಾಗುತ್ತದೆ. ಸುನ್ಸಿಕ್ ಹಸಿರು, ಹಳದಿ, ಬಿಳಿ, ಕೆಂಪು ಮತ್ತು ಕಪ್ಪು ಬಣ್ಣದಲ್ಲಿರುತ್ತದೆ. ಇದು ತಿನ್ನಲು ರುಚಿಕರ ಮತ್ತು ಆರೋಗ್ಯಕ್ಕೆ ಒಳ್ಳೆಯದು. ಕಹಿ, ಸಿಹಿ, ಹುಳಿ, ಉಪ್ಪು ಮತ್ತು ಮಸಾಲೆಯ ಐದು ರೀತಿಯ ರುಚಿಗಳನ್ನು ಪ್ರತಿಬಿಂಬಿಸುತ್ತದೆ.
ಸುನ್ಸಿಕ್ ಅನ್ನು ತಿನ್ನುವ ರೀತಿ ಕೂಡ ತುಂಬಾ ವಿಶೇಷವಾಗಿರುತ್ತದೆ. ಕೊರಿಯನ್ ಜನರು ಇದನ್ನು ಎಚ್ಚರಿಕೆಯಿಂದ ಬೇಯಿಸುವುದು ಮಾತ್ರವಲ್ಲದೆ ನಿಧಾನವಾಗಿ ತಿನ್ನುತ್ತಾರೆ ಮತ್ತು ಪ್ರತಿ ತುಂಡನ್ನು ಸವಿಯುತ್ತಾರೆ.
ಇದು ಕಾಯಿಲೆಗಳನ್ನು ಗುಣಪಡಿಸುವ ಮತ್ತು ದೇಹವನ್ನು ಸ್ವಚ್ಛವಾಗಿರಿಸುವ ವಸ್ತುಗಳನ್ನು ಒಳಗೊಂಡಿದೆ. ಇದರಲ್ಲಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಬಳಸಲಾಗುತ್ತದೆ. ಆದ್ದರಿಂದ ಇದು ದೀರ್ಘಾಯುಷ್ಯಕ್ಕೆ ಸಹಕಾರಿ. ಕೊರಿಯನ್ನರಂತೆ ಬಹಳ ವರ್ಷ ಬದುಕುವ ಆಸೆ ಉಳ್ಳವರು ತಾಜಾ ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಡಯಟ್‌ನಲ್ಲಿ ಸೇರಿಸಿಕೊಳ್ಳಬೇಕು. ಇವು ದೇಹಕ್ಕೆ ಜೀವಸತ್ವ, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ತರಾತುರಿಯಲ್ಲಿ ಆಹಾರವನ್ನು ತಿನ್ನುವ ಬದಲು ಅವರಂತೆ ನಿಧಾನವಾಗಿ ಅಗಿದು ತಿನ್ನುವುದನ್ನು ರೂಢಿಸಿಕೊಳ್ಳಬೇಕು.