
ಕೊಪ್ಪಳ: ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ, ವಿದೇಶಿ ಮಹಿಳೆ ಹಾಗೂ ರೆಸಾರ್ಟ್ ಮಲಕಿ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣ ಸಂಬಂಧ ಪರಾರಿಯಾಗಿದ್ದ ಮತ್ತೋರ್ವ ಆರೋಪಿಯನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.
ಸಾಯಿರಾಮ್ ಬಂಧಿತ ಆರೋಪಿ. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದ ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪುರದಲ್ಲಿ ಹೋಂ ಸ್ಟೇ ಮೇಲೆ ದಾಳಿ ನಡೆಸಿದ್ದ ಆರೋಪಿಗಳು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ, ವಿದೇಶಿ ಮಹಿಳೆಯೊಬ್ಬರ ಮೇಲೆ ಹಾಗೂ ಹೋಂ ಸ್ಟೇ ಮಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದರು. ಕೊಪ್ಪಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳಾದ ಮಲ್ಲೇಶ್ (22) ಹಾಗೂ ಚೇತನ್ ಸಾಯಿ (21) ಎಂಬುವವರನ್ನು ಈಗಾಗಲೇ ಬಂಧಿಸಲಾಗಿತ್ತು. ಓರ್ವ ಆರೋಪಿ ತಲೆಮರೆಸಿಕೊಂಡಿದ್ದ. ಇಂದು ತಮಿಳುನಾಡಿನಲ್ಲಿ ಆರೋಪಿ ಸಾಯಿರಾಮ್ ನನ್ನು ಬಂಧಿಸಲಾಗಿದೆ.