ಕೊಪ್ಪಳ: ನಗರಸಭೆ ಬಿಜೆಪಿ ಸದಸ್ಯರೊಬ್ಬರು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆಗೆ ಕುಳಿತಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ವಾರ್ಡ್ ಗಳಿಗೆ ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಹಲವುಬಾರಿ ಅಧ್ಯಕ್ಷ, ಪೌರಾಯುಕ್ತ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ಮಾಡಿದ್ದಾರೆ. ವಾರ್ಡ್ ಗಳಲ್ಲಿ ಮೂಲಸೌಕರ್ಯ ಕೂಡ ಇಲ್ಲ ಎಂದು ಆರೋಪಿಸಿ ನಗರಸಭೆ ಬಿಜೆಪಿ ಸದಸ್ಯ ಸೋಮಣ್ಣ ಹಳ್ಳಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ್ದಾರೆ.
ನಗರಸಭೆ ಮೆಟ್ಟಿಲುಗಳ ಮೇಲೆ ಏಕಾಂಗಿಯಾಗಿ ತಲೆ ಮೇಲೆ ಕಲ್ಲು ಹೊತ್ತು ಧರಣಿ ಕುಳಿತಿದ್ದು, ವಾರ್ಡ್ ಗಳಲ್ಲಿ ಯಾವುದೇ ಆಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಅನುದಾನ ಹಂಚಿಕೆಯಲ್ಲಿಯೂ ಅಧಿಕಾರಿಗಳು ತಾರತಮ್ಯವೆಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯ ಸೋಮಣ್ಣ ನಗರಸಭೆಯ 16ನೇ ವಾರ್ಡ್ ಸದಸ್ಯರಾಗಿದ್ದು, ನಗರಸಭೆ ಮೆಟ್ಟಿಲ ಮೇಲೆ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಇಯ ಇತರ ಸದಸ್ಯರು ಸೋಮಣ್ಣ ಮನವೊಲಿಕೆಗೆ ಯತ್ನಿಸಿದರೂ ಧರಣಿ ಹಿಂಪಡೆದಿಲ್ಲ. ಬಳಿಕ ಪೌರಾಯುಕ್ತ ಗಣಪತಿ ಪಾಟೀಲ್ ಸ್ಥಳಕ್ಕಾಗಮಿಸಿ ಸದಸ್ಯರ ಮನವಿ ಸ್ವೀಕರಿಸಿ, ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದಿದ್ದಾರೆ.