ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅಂಜನಾದ್ರಿ ಭಾಗದ ಅಭಿವೃದ್ಧಿ ನಿಟ್ಟಿನಲ್ಲಿ ಹಾಕಲಾಗಿದ್ದ ಬಿಲ್ಲು-ಬಾಣಗಳ ಮಾದರಿಯ ವಿದ್ಯುತ್ ಕಂಬ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಬಿಲ್ಲು-ಬಾಣ ಮಾದರಿಯ ವಿದ್ಯುತ್ ಕಂಬ ತೆರವಿಗೆ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ.
ಅಲ್ಲದೇ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಸಂಸ್ಥೆ (KRIDL) ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ.
ಜುಲೈನಗರದಿಂದ ರಾಣಾ ಪ್ರತಾಪ್ ವೃತ್ತದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಬಿಲ್ಲು-ಬಾಣ ಮಾದರಿಯ ವಿದ್ಯುತ್ ಕಂಬಗಳನ್ನು ಹಾಕಲಾಗಿತ್ತು. ಧಾರ್ಮಿಕ ಸೌಹಾರ್ಧತೆಗೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಈ ರೀತಿ ವಿದ್ಯುತ್ ಕಂಬಗಳನ್ನು ನಿರ್ಮಿಸಲಾಗಿದೆ. ಇದು ಸಾರ್ವಜನಿಕರಲ್ಲಿ ಶಾಂತಿಗೆ ಭಂಗ ಉಂಟುಮಾಡುವ ಸಾಧ್ಯತೆಗಳಿವೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಬಿಲ್ಲು-ಬಾಣಗಳ ವಿದ್ಯುತ್ ಕಂಬ ತೆರವಿಗೆ ತಹಶೀಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಕಾಮಗಾರಿ ಕೈಗೊಂಡಿದ್ದ ಕೆಆರ್ ಐಡಿಎಲ್ ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ.