ಕೊಪ್ಪಳ: ಏಳನೇ ತರಗತಿ ಪಾಸ್ ಆಗಿದ್ದರೂ ಭಾಷಾ ವಿಷಯಗಳಲ್ಲಿ ಮಕ್ಕಳು ವೀಕ್ ಆಗಿದ್ದಾರೆ. 7,000 ಮಕ್ಕಳಿಗೆ ಓದಲು, ಬರೆಯಲು ಬಾರದೇ ಇರುವುದು ಪತ್ತೆಯಾಗಿದೆ.
ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಓದಲು, ಬರೆಯಲು ಬರುತ್ತಿಲ್ಲ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ. ಹೈಸ್ಕೂಲ್ ಪ್ರವೇಶ ಸಂದರ್ಭದಲ್ಲಿ ಮಕ್ಕಳನ್ನು ಪರೀಕ್ಷಿಸಿದಾಗ ಈ ವಿಚಾರ ಪತ್ತೆಯಾಗಿದೆ.
ಕಳೆದ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಪರೀಕ್ಷೆ ನಡೆಸಿದಾಗ ಕನ್ನಡ ಓದಲು, ಬರೆಯಲು ಬಾರದೇ ಇರುವುದು ಗೊತ್ತಾಗಿದ್ದು, ಈ ಕಾರಣಕ್ಕೆ ಎಸ್‌ಎಸ್‌ಎಲ್‌ಸಿಯಲ್ಲಿ ಫಲಿತಾಂಶ ಕಡಿಮೆ ಬರುತ್ತಿದೆ ಎಂದು ಶಿಕ್ಷಕರು ಹೇಳಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಕೊಪ್ಪಳ ಜಿಲ್ಲೆಯ ಎಲ್ಲಾ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಕೊಪ್ಪಳ ಡಿಡಿಪಿಐ ಶ್ರೀಶೈಲ ಬಿರಾದಾರ ಪತ್ರ ಬರೆದು 7ನೇ ತರಗತಿ ಮಕ್ಕಳಿಗೆ ಓದಲು ಬರೆಯಲು ಬರುವಂತೆ ನೋಡಿಕೊಳ್ಳಿ. ಮಕ್ಕಳು ನಿಗದಿತ ಗುರಿ ತಲುಪದೇ ಇದ್ದರೆ ನಿಮ್ಮ ವಾರ್ಷಿಕ ಬಡ್ತಿಗೆ ತಡೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.