ರಾಜ್ಯದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹರಡಿದ್ದು, ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿರುವ ಕಾರಣ ಜಿಲ್ಲೆಯ ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಇತ್ತಿಚಿಗೆ ರಾಜ್ಯದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಜಿಲ್ಲೆಯಲ್ಲಿ ಸುಳ್ಳು ವದಂತಿ ಹರಡುತ್ತಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಮತ್ತು ತಮ್ಮ ಗ್ರಾಮಕ್ಕೆ ಆಗಮಿಸುವ ಬೇರೆ ಗ್ರಾಮದ ವ್ಯಕ್ತಿಗಳ ಮೇಲೆ ಯಾವುದೇ ಕಾರಣಕ್ಕೂ ಆವೇಶ ಮತ್ತು ಆತಂಕಕ್ಕೆ ಒಳಗಾಗಿ ದೈಹಿಕವಾಗಿ ಹಲ್ಲೆ ಮಾಡಬಾರದು. ಒಂದು ವೇಳೆ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸ್ ಸಹಾಯವಾಣಿಗೆ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕಂಟ್ರೋಲ್ ರೂಂ (Police Control Room Koppal) ಕೊಪ್ಪಳಕ್ಕೆ ಅಥವಾ ತಮಗೆ ಗೊತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಕೂಡಲೇ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.
ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸುಳ್ಳು ಸುದ್ದಿಯ ಬಗ್ಗೆ ಸಾರ್ವಜನಿಕರು ವ್ಯಾಟ್ಸ್ ಆಪ್, ಫೇಸ್ ಬುಕ್ ನಲ್ಲಿ ಬರುವ ಸುಳ್ಳು ಸುದ್ದಿಗಳನ್ನು ಶೇರ್ ಮತ್ತು ಫಾರ್ ವರ್ಡ್ ಮಾಡಬಾರದು. ಶೇರ್ ಮತ್ತು ಫಾರ್ವರ್ಡ್ ಮಾಡುವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.