ಕೊಪ್ಪಳ: ಸಾಕು ನಾಯಿಯೊಂದು ತನ್ನ ಮಾಲೀಕರ ಜೀವ ಉಳಿಸಿದ ಘಟನೆ ಮಂಗಳವಾರ ರಾತ್ರಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.
ಗಂಗಾವತಿಯ ಮಹಾವೀರ ಸರ್ಕಲ್ ಸಮೀಪದ ಚಿನಿವಾಲರ್ ಆಸ್ಪತ್ರೆ ಎದುರಿನ ಹೋಟೆಲ್ ನಲ್ಲಿ ಮಂಗಳವಾರ ತಡರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ಹೊಹತ್ತಿಕೊಂಡಿದೆ. ಹೋಟೆಲ್ ಪಕ್ಕದ ಮನೆಗೂ ಬೆಂಕಿ ವ್ಯಾಪಿಸಿದ್ದು, ಸಾಕು ನಾಯಿ ಒಂದೇ ಸಮನೆ ಬೊಗಳಿ ಅಪಾಯದ ಮುನ್ಸೂಚನೆ ನೀಡಿದೆ. ನಾಯಿ ವಿಚಿತ್ರವಾಗಿ ಬೊಗಳಿದ್ದರಿಂದ ಮನೆ ಮಾಲೀಕರು ಕಳ್ಳರು ಬಂದಿರಬಹುದು ಎಂದು ಹೊರಗೆ ನೋಡಲು ಬಂದಿದ್ದಾರೆ.
ಆಗ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅವರು ಮನೆಯಲ್ಲಿ ಮಲಗಿದ್ದ ಉಳಿದವರನ್ನು ಎಬ್ಬಿಸಿ ಹೊರಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಹೋಟೆಲ್ ನಲ್ಲಿ ಇದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಭಾರಿ ಪ್ರಮಾಣದಲ್ಲಿ ಬೆಂಕಿ ಆವರಿಸಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರುವ ಮೊದಲು ಮನೆ ಮತ್ತು ಹೋಟೆಲ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸಾಮಗ್ರಿಗಳು ಸುಟ್ಟು ಕರಕಲಾಗಿವೆ.