ಕೊಪ್ಪಳ: ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ವಿರೋಧಿಸಿ ಜನವರಿ 6ರಂದು ಕೊಪ್ಪಳ ಬಂದ್ ಗೆ ಕರೆ ನೀಡಲಾಗಿದೆ.
ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಗೃಹ ಸಚಿವರು ದೇಶದ ಜನರ ಕ್ಷಮೆಯಾಚಿಸಬೇಕು ಮತ್ತು ಕೇಂದ್ರ ಸರ್ಕಾರ ಅವರ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ಕೈಗೊಳ್ಳಲಾಗಿದೆ.
ಎಲ್ಲಾ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಮಾದಿಗ, ಚಲವಾದಿ, ಮುಸ್ಲಿಂ, ಕ್ರಿಶ್ಚಿಯನ್, ಲಂಬಾಣಿ ಸಮಾಜ, ಲಿಂಗಾಯಿತ, ಹಾಲುಮತ, ವಾಲ್ಮೀಕಿ, ಭೋವಿ, ಭಜಂತ್ರಿ, ಮಡಿವಾಳ, ಪಂಚಮಸಾಲಿ, ಸುಡುಗಾಡು ಸಿದ್ದರು, ಚನ್ನದಾಸರು, ಶಿಳ್ಳೆಕ್ಯಾತರ, ಸವಿತಾ ಸಮಾಜ ಸೇರಿದಂತೆ ಅನೇಕ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ಹನುಮೇಶ್ ಕಡೆಮನಿ ಹೇಳಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸಂಘಟಕರು ಮನವಿ ಮಾಡಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕೊಪ್ಪಳ ನಗರ ಬಂದ್ ಗೆ ಕರೆ ನೀಡಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಕೈಗೊಳ್ಳಲಾಗಿದೆ. ಆಟೋ, ಬೈಕುಗಳ ಮೂಲಕ ಸಂಘಟನೆಗಳು ಪ್ರತಿಭಟನೆ ರ್ಯಾಲಿ ಹಮ್ಮಿಕೊಂಡಿವೆ. ಭದ್ರತೆಗಾಗಿ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ, ಸರ್ಕಾರಿ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿಲ್ಲ. ಸರ್ಕಾರಿ ಶಾಲೆಗಳ ಬಗ್ಗೆ ಜಿಲ್ಲಾಡಳಿತ ಯಾವುದೇ ಮಾಹಿತಿ ನೀಡಿಲ್ಲ.