ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿರುವಂತೆ ಹೊಸ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈಗ ರೇಂಜರ್ ಮತ್ತು ವೆನಿಸ್ ಎನ್ನುವ ಎರಡು ಎಲೆಕ್ಟ್ರಿಕ್ ಗಾಡಿಗಳನ್ನ ಕೊಮಾಕಿ ಬಿಡುಗಡೆ ಮಾಡಿದೆ. ಕೊಮಾಕಿ ರೇಂಜರ್, ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿದ್ದು ಇದರ ಬೆಲೆ 1.68 ಲಕ್ಷ ರೂ. ಕೊಮಾಕಿ ವೆನಿಸ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು ಇದರ ಬೆಲೆ 1.15ಲಕ್ಷ ರೂ. ರೆಟ್ರೊ ವಿನ್ಯಾಸವನ್ನು ಹೊಂದಿರುವ ವೆನಿಸ್ ನೋಡ್ತಿದ್ದ ಹಾಗೇ ವೆಸ್ಪಾ ನೆನಪಾಗುತ್ತದೆ. ರೇಂಜರ್ ಸಂಪೂರ್ಣ-ಎಲೆಕ್ಟ್ರಿಕ್ ಕ್ರೂಸರ್ ಮೋಟಾರ್‌ಸೈಕಲ್ ಆಗಿದ್ದು, ಪೆಟ್ರೋಲ್ ಚಾಲಿತ ಮೋಟಾರ್‌ಸೈಕಲ್‌ನಂತೆಯೆ ಕಾಣುತ್ತದೆ.
ಕ್ರೋಮ್ ಕೌಲ್, ಎತ್ತರದ ಹ್ಯಾಂಡಲ್ ಬಾರ್, ಟಿಯರ್‌ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಸ್ಪ್ಲಿಟ್ ಸ್ಟೆಪ್-ಅಪ್ ಸೀಟ್, ಹಿಂಭಾಗದ ಬ್ಯಾಕ್‌ರೆಸ್ಟ್ ಮತ್ತು ಪ್ಯಾನಿಯರ್‌ಗಳೊಂದಿಗೆ ಒಳ್ಳೆ ಲುಕ್ ಇರುವ ಕೋಮಾಲಿ ರೇಂಜರ್ ಗೆ ಅದರ ರೌಂಡ್ ಹೆಡ್‌ಲ್ಯಾಂಪ್ ಮತ್ತಷ್ಟು ಮೆರುಗು ನೀಡುತ್ತದೆ. ಹೊರಭಾಗಕ್ಕೆ ಕ್ರೋಮ್‌ನ ವ್ಯಾಪಕ ಬಳಕೆಯು ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಮೋಟಾರ್‌ಸೈಕಲ್‌ನ ಒಟ್ಟಾರೆ ಸೌಂದರ್ಯವನ್ನು ದ್ವಿಗುಣಗೊಳಿಸಿದೆ.
ಈ ಇ-ಬೈಕ್ 4 kWh ಬ್ಯಾಟರಿ ಪ್ಯಾಕ್ ಮತ್ತು 5.36 bhp ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ 180 ಕಿಮೀ ನಿಂದ 220 ಕಿಮೀ ರೈಡಿಂಗ್ ಶ್ರೇಣಿಯನ್ನು ನೀಡುತ್ತದೆ. ಕೊಮಾಕಿ ರೇಂಜರ್, ಬ್ಲೂಟೂತ್ ಸೌಂಡ್ ಸಿಸ್ಟಮ್, ಸೈಡ್ ಸ್ಟ್ಯಾಂಡ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, ಆಂಟಿ-ಥೆಫ್ಟ್ ಲಾಕ್ ಸಿಸ್ಟಮ್ ಮತ್ತು ಎರಡು ಪ್ಯಾನಿಯರ್‌ಗಳಂತಹ ಇತರ ಪರಿಕರಗಳೊಂದಿಗೆ ಸುಸಜ್ಜಿತವಾಗಿದೆ.
ಮತ್ತೊಂದೆಡೆ, ಕೊಮಾಕಿ ವೆನಿಸ್ ಒಂದು ಸುತ್ತಿನ ಹೆಡ್‌ಲ್ಯಾಂಪ್, ಕ್ರೋಮ್ ಮಿರರ್‌ಗಳು, ಸ್ಪ್ಲಿಟ್ ಸೀಟ್‌ಗಳು ಮತ್ತು ಸುರಕ್ಷತಾ ಗಾರ್ಡ್‌ಗಳನ್ನು ಹೊಂದಿರುವ ರೆಟ್ರೋ ಸ್ಕೂಟರ್ ಆಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 2.9 kWh ಬ್ಯಾಟರಿ ಪ್ಯಾಕ್ ಮತ್ತು 4 bhp ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ 120 ಕಿಮೀ ವರೆಗೆ ರೈಡಿಂಗ್ ಶ್ರೇಣಿಯನ್ನು ನೀಡುತ್ತದೆ. ಇ-ಸ್ಕೂಟರ್ ಸೆಲ್ಫ ಡಯಾಗ್ನಾಸಿಸ್ ಸಿಸ್ಟಮ್, ಮೊಬೈಲ್ ಚಾರ್ಜಿಂಗ್ ಪೋರ್ಟ್, ರೀಜನರೇಟಿವ್ ಬ್ರೇಕಿಂಗ್ ಸಿಸ್ಟಮ್, ಆಂಟಿ-ಥೆಫ್ಟ್ ಲಾಕ್ ಸಿಸ್ಟಮ್, ರಿವರ್ಸಿಂಗ್ ಅಸಿಸ್ಟ್ ಮತ್ತು ಹಿಂಭಾಗದಲ್ಲಿ ಜೋಡಿಸಲಾದ ಸ್ಟೋರೇಜ್ ಬಾಕ್ಸ್‌ನಂತಹ ಫೀಚರ್ ಗಳಿವೆ.