
ಮೇರಾ ನಾಮ್ ಜೋಕರ್ ಸಿನಿಮಾದಲ್ಲಿ ತಾಯಿಯನ್ನು ಕಳೆದುಕೊಂಡ ನಂತರವೂ ರಾಜು ಸರ್ಕಸ್‌ಗೆ ಬಂದ ಜನರ ಎದುರು ನಗುತ್ತಲೇ ಪ್ರದರ್ಶನ ನೀಡಿದ. ಅದೇ ರೀತಿ ಸರ್ಕಸ್ ಕೂಡ ಎಲ್ಲ ರೀತಿಯ ನಷ್ಟ, ಕಷ್ಟಗಳ ನಡುವೆಯೂ ನಗುತ್ತಲೇ ಸಾಗುತ್ತಿದೆ ಎನ್ನುತ್ತಾರೆ ಪಶ್ಚಿಮ ಬಂಗಾಳದ ಕೋಲ್ಕೊತಾದಲ್ಲಿನ ಖ್ಯಾತ ಸರ್ಕಸ್ ’’ಅಜಂತಾ ಸರ್ಕಸ್’’ ಮಾಲೀಕ ರಬಿವುಲ್ ಹಕ್ ಅವರು.
25 ವರ್ಷಗಳ ಮುನ್ನ ಸರ್ಕಸ್ ಬಗ್ಗೆ ಇದ್ದ ಕುತೂಹಲ ಈಗಿನ ಜನರಿಗೆ ಇಲ್ಲ. ಸಿನಿಮಾ, ಮಾಲ್‌ಗಳು, ಬೈಕ್ ರೇಸ್ ರೀತಿಯಲ್ಲಿ ಅನೇಕ ಮನರಂಜನೆಗಳು ಜನರನ್ನು ಸೆಳೆದುಕೊಂಡಿದೆ. ಆದರೆ, ಸರ್ಕಸ್ ಕಂಡು ನಿಬ್ಬೆರಗಾಗುವ ಕೆಲವೇ ಬೆರಳೆಣಿಕೆ ಜನರು ಈಗಲೂ ಇದ್ದಾರೆ. ಅಂಥವರಿಗಾಗಿ ಅಜಂತಾ ಸರ್ಕಸ್ ಸಾಗುತ್ತಿದೆ. ಏನೇ ಆಗಲಿ ಪ್ರದರ್ಶನ ಸಾಗುತ್ತಲೇ ಇರಬೇಕು ಎಂದು ಬಾಲಿವುಡ್ ದಿಗ್ಗಜ ರಾಜ್ ಕಪೂರ್ ಹೇಳಿದ್ದಾರಲ್ಲ ಎಂದು ಅನುಭವದ ಬುತ್ತಿಯನ್ನು ತೆರೆದಿದ್ದಾರೆ ಹಕ್ ಸಾಹೇಬರು.
ಡಿಸೆಂಬರ್ ಅಂತ್ಯದಿಂದ ಫೆಬ್ರವರಿ ಮಧ್ಯದವರೆಗೆ ಸರ್ಕಸ್ ನಡೆಯುವ ಕಾಲ. ಜೋಕರ್‌ಗಳ ತಮಾಷೆ, ಹಗ್ಗದ ಮೇಲೆ ನಡೆದಾಡುವ ಸಾಹಸಮಯ ಪ್ರದರ್ಶನ, ಬೈಕ್ ಸ್ಟಂಟ್‌ಗಳು, ಪ್ರಾಣಿಗಳ ಮೋಜು ಮಸ್ತಿಯು 3 ರಿಂದ 4 ಗಂಟೆಗಳವರೆಗೆ ಜನರನ್ನು ಬಿಗಿಯಾಗಿ ಚೇರಿನ ಮೇಲೆ ಕೂರಿಸುತ್ತದೆ. ಆದರೆ, ಕೊರೊನಾ ಹಾವಳಿಯಿಂದಾಗಿ ಕಳೆದ ಎರಡು ವರ್ಷಗಳು, ಸರ್ಕಸ್ ನೋಡಲು ಬರುತ್ತಿದ್ದ ಅಲ್ಪ ಪ್ರಮಾಣದ ಜನರು ಕೂಡ ಬರುತ್ತಿಲ್ಲ. ಹಾಗಿದ್ದೂ, ನಷ್ಟದ ಹೊಡೆತ ಸುಧಾರಿಸಿಕೊಳ್ಳುತ್ತಲೇ ಸರ್ಕಸ್ ಸಾಗುತ್ತಿದೆಯಂತೆ.
ಕೆಲವು ನಾಯಿಗಳು ಮತ್ತು ಗಿಣಿಗಳನ್ನು ಮಾತ್ರವೇ ಸರ್ಕಸ್‌ನಲ್ಲಿ ಬಳಸಲಾಗುತ್ತಿದೆ. ವಿದೇಶಿ ಜಿಮ್ನಾಸ್ಟಿಕ್ ಪಟುಗಳು ಇವಾಗಿಲ್ಲ. ಅನೇಕ ಸರ್ಕಸ್ ಕಲಾವಿದರು, ಸಾಹಸ ಕಲಾವಿದರು ಸದ್ಯ ಆಟೋಚಾಲನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಎರಡು ಸಾವಿರ ಜನರನ್ನು ಕೂರಿಸಿಕೊಳ್ಳಬಲ್ಲ ಸಾಮರ್ಥ್ಯದ ಸರ್ಕಸ್ ಟೆಂಟ್‌ನಲ್ಲಿ ಸದ್ಯ 50 ಜನರಿದ್ದರೆ ಹೆಚ್ಚು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.