ಉಸಿರಾಟದ ವೇಳೆ ಆಕಸ್ಮಿಕವಾಗಿ ಮೂಗುಬೊಟ್ಟಿನ ತಿರುಪು ಶ್ವಾಸಕೋಶದೊಳಕ್ಕೆ ಹೋಗಿದ್ದು ಇದರಿಂದ ಮಹಿಳೆ ಶಸ್ತ್ರಚಿಕಿತ್ಸೆಗೊಳಗಾದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ. 35 ವರ್ಷದ ಮಹಿಳೆಯೊಬ್ಬರು ಎರಡು ತಿಂಗಳ ಹಿಂದೆ ಉಸಿರಾಟದ ವೇಳೆ ಆಕಸ್ಮಿಕವಾಗಿ ಮೂಗುಬೊಟ್ಟಿನ ತಿರುಪು ಅವರ ಶ್ವಾಸಕೋಶ ಸೇರಿತ್ತು.
ಆರಂಭದಲ್ಲಿ ಮಹಿಳೆ ವರ್ಷಾ ಸಾಹು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರು. ತಿರುಪು ಮಲ ವಿಸರ್ಜನೆ ವೇಳೆ ಹೊರಗೆ ಬರುತ್ತದೆಂದು ನಂಬಿದ್ದರು. ಆದರೆ ದಿನ ಕಳೆದಂತೆ ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆಯ ನಂತರ ವೈದ್ಯರನ್ನು ಸಂಪರ್ಕಿಸಿದಾಗ ಆಘಾತಕಾರಿ ಅಂಶ ಬಯಲಿಗೆ ಬಂತು. ಅಂತಿಮವಾಗಿ ತಿರುಪನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಯಿತು. ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಇದನ್ನು “ಅತ್ಯಂತ ಅಪರೂಪದ” ವೈದ್ಯಕೀಯ ಪ್ರಕರಣ ಎಂದು ಕರೆದಿದ್ದಾರೆ.
ಮೂಗುಬೊಟ್ಟಿನ ತಿರುಪು ಸಡಿಲವಾಗಿತ್ತು ಎಂದು ನನಗೆ ತಿಳಿದಿರಲಿಲ್ಲ. ನಾನು ಆಳವಾಗಿ ಉಸಿರು ತೆಗೆದುಕೊಂಡಾಗ ಅದು ಶ್ವಾಸಕೋಶಕ್ಕೆ ಹೋಗಿದೆ ಎಂದು ಭಾವಿಸಿರಲಿಲ್ಲ. ಹೊಟ್ಟೆ ಭಾಗವನ್ನು ತಲುಪಿರುತ್ತದೆ, ವಿಸರ್ಜನೆ ವೇಳೆ ಹೊರಗೆ ಬರುತ್ತದೆ ಎಂದು ಭಾವಿಸಿದ್ದೆ ಎಂದು ಬಿಬಿಸಿಗೆ ವರ್ಷಾ ಸಾಹು ಹೇಳಿದ್ದಾರೆ.
ತಿರುಪು ಒಳಗೆ ಹೋದ ನಂತರ ವರ್ಷಾ ಸಾಹು ನಿರಂತರ ಕೆಮ್ಮಿನಿಂದ ಬಳಲಿದ್ದು ವೈದ್ಯರ ಬಳಿಗೆ ಹೋದರು. ಮೂಗಿನೊಳಗೆ ಆಗಿದ್ದ ಗಾಯದಿಂದ ಉಸಿರಾಟದ ತೊಂದರೆ ಅನುಭವಿಸುತ್ತಿರುವುದಾಗಿ ತಿಳಿಸಿದ್ದರು. ಔಷಧಿಗಳಿಂದ ಈ ಸಮಸ್ಯೆ ಪರಿಹಾರವಾಗದಿದ್ದಾಗ ಮತ್ತೊಬ್ಬ ವೈದ್ಯರ ಸಲಹೆಯಂತೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ಶ್ವಾಸಕೋಶದಲ್ಲಿ ತಿರುಪು ಪತ್ತೆಯಾಗಿತ್ತು. ಘಟನೆ ನಡೆದ 2 ತಿಂಗಳ ನಂತರ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ.
ವರದಿಯ ಪ್ರಕಾರ, ಕಳೆದ ಒಂದು ದಶಕದಲ್ಲಿ ಇಂತಹ ಎರಡು ಪ್ರಕರಣಗಳು ಸಂಭವಿಸಿವೆ. ಸದ್ಯ ವರ್ಷಾ ಸಾಹು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.