ಕೋಲ್ಕತ್ತಾ: ಬಿಧಾನ್ ನಗರದಲ್ಲಿ ಸ್ಪಾ ಸೆಂಟರ್ ಹೆಸರಲ್ಲಿ ಸೆಕ್ಸ್ ರಾಕೆಟ್ ನಡೆಸಲಾಗುತ್ತಿದೆ ಎಂದು ಮಹಿಳೆ ಆರೋಪಿಸಿದ್ದು, ಎಫ್‌ಐಆರ್ ದಾಖಲಾಗಿದೆ
ಈ ಕುರಿತಾಗಿ ಮಹಿಳೆ ಬಿಧಾನ್ ನಗರ ಕಮಿಷನರೇಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಸ್ಪಾ ಸೆಂಟರ್ ನಲ್ಲಿ ಸೆಕ್ಸ್ ರಾಕೆಟ್ ನಡೆಸಲಾಗುತ್ತಿದೆ ಎಂದು ಈ ಸ್ಪಾ ಸೆಂಟರ್ ನ ಎರಡು ಶಾಖೆಗಳಿಗೆ ಮ್ಯಾನೇಜರ್ ಆಗಿ ನೇಮಕಗೊಂಡಿದ್ದಾಗಿ ಹೇಳಿಕೊಂಡಿರುವ ಸಂತ್ರಸ್ತೆ ತಿಳಿಸಿದ್ದಾರೆ.
ಸಂತ್ರಸ್ತೆಯ ಪ್ರಕಾರ, ಮಾರ್ಚ್ 24 ರಂದು 30,000 ರೂಪಾಯಿಗಳ ಮಾಸಿಕ ಸಂಬಳದಲ್ಲಿ ಸ್ಪಾ ಸೆಂಟರ್ ಗೆ ಕೆಲಸಕ್ಕೆ ಸೇರಿದ್ದಾರೆ. ಆದರೆ, ಮರುದಿನವೇ ಗ್ರಾಹಕರೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಆಕೆಗೆ ಒತ್ತಾಯಿಸಲಾಗಿದೆ. ತನಗೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡಲಾಗುತ್ತಿದೆ. ಸ್ಪಾ ಮಾಲೀಕರು ತನಗೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಮಾರ್ಚ್ 24 ರಂದು, ಪ್ರಭಾಸಾ ಸ್ಪಾ ಮಾಲೀಕ ಬಾಬಾಯಿ ಘೋಷ್ 30,000 ರೂಪಾಯಿಗಳ ಮಾಸಿಕ ಸಂಬಳದೊಂದಿಗೆ ನನ್ನನ್ನು ಮ್ಯಾನೇಜರ್ ಆಗಿ ನೇಮಿಸಿದರು. ಕೆಲಸದ ಸ್ವರೂಪದ ಬಗ್ಗೆ ನನಗೆ ತಿಳಿದಿರಲಿಲ್ಲ. ಮಾಲೀಕರೊಂದಿಗೆ ಸ್ಪಾ ಶಾಖೆಗಳಿಗೆ ಭೇಟಿ ನೀಡಿದ್ದೆ. ಮರುದಿನ ಕೆಲಸಕ್ಕೆ ಹಾಜರಾಗಿದ್ದೆ. ಕೆಲವು ಗ್ರಾಹಕರು ಅಲ್ಲಿಗೆ ಬಂದಿದ್ದರು. ನಿರ್ವಾಹಕಿ ಅಸ್ಮಿತಾ ನನ್ನ ರೇಟ್ ಕೇಳಿದರು, ಅದನ್ನು ನಾನು ನಿರಾಕರಿಸಿದೆ. ಅದೇ ದಿನ, ಸಹಾಯಕ ವ್ಯವಸ್ಥಾಪಕರು ನನ್ನನ್ನು ಗ್ರಾಹಕರ ಕೋಣೆಗೆ ಬಲವಂತವಾಗಿ ಕಳುಹಿಸಿದ್ದರು. ಆಗ ನಾನು ಧೈರ್ಯ ಮಾಡಲಿಲ್ಲ. ನಂತರದಲ್ಲಿ ಮಾಲೀಕ ಬಾಬಾಯಿ ಘೋಷ್ ಫೋನ್ ಕರೆ ಮಾಡಿ, ಕನಿಷ್ಠ ಒಂದೂವರೆ ತಿಂಗಳಾದರೂ ಕೆಲಸ ಹೇಗೆ ನಡೆಯುತ್ತದೆ ಎಂಬುದನ್ನು ನೋಡಿಕೊಂಡು ನಂತರ ತಿಂಗಳಲ್ಲಿ ಒಂದೆರಡು ಗ್ರಾಹಕರನ್ನು ನಿಭಾಯಿಸುವಂತೆ ಕೇಳಿಕೊಂಡರು ಎಂದು ಮಹಿಳೆ ಆರೋಪಿಸಿದ್ದಾರೆ.
ಪೊಲೀಸರನ್ನು ಸಂಪರ್ಕಿಸಿದರೂ ಅವರು ಸ್ಪಂದಿಸದ ಕಾರಣ ಕಮಿಷನರ್ ಗೆ ಕಚೇರಿಗೆ ದೂರು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.