ಕಳೆದ ಕೆಲ ದಿನಗಳಿಂದ ಭಾರೀ ಹಾಗೂ ಸತತ ಮಳೆಯಿಂದಾಗಿ ಕೋಲ್ಕತ್ತಾದ ಬೀದಿಗಳು ಜಲಾವೃತಗೊಂಡಿವೆ. ನಗರದ ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಹೌರಾ, ಹೂಗ್ಲಿ ಮತ್ತು ಪೂರ್ವ ಮೆದಿನಿಪುರಗಳ ರಸ್ತೆಗಳು ನೀರಿನಲ್ಲಿ ಮುಳುಗಿವೆ.
ಕೆಲವೆಡೆಗಳಲ್ಲಿ ಸೊಂಟದುದ್ದ ನೀರು ನಿಂತಿದ್ದು, ಕಚೇರಿಗೆ ತೆರಳುವ ಮಂದಿ ದೋಣಿಗಳಲ್ಲಿ ತೆರಳಬೇಕಾಗಿ ಬಂದಿದೆ. ಇದರ ನಡುವೆ ಕೆಲ ಮಂದಿ ರಸ್ತೆಗಳಲ್ಲಿ ಮೀನು ಹಿಡಿಯುತ್ತಿರುವ ಚಿತ್ರಗಳು ವೈರಲ್ ಆಗಿವೆ.
ಇಂಥದ್ದೇ ರಸ್ತೆಯೊಂದರಲ್ಲಿ ಬಲೆ ಹಾಕಿ ಮೀನು ಹಿಡಿಯುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವನ್ನು ಫೇಸ್ಬುಕ್ ಬಳಕೆದಾರ ಪಿಯು ಮೊಂಡಲ್ ಶೇರ್ ಮಾಡಿದ್ದಾರೆ.
ಕಣ್ಣಾಲಿಗಳು ತುಂಬಿ ಬರುತ್ತೆ ಮೊದಲ ಬಾರಿಗೆ ತನ್ನ ಮಗುವನ್ನು ಹಿಡಿದುಕೊಂಡ ತಂದೆ ಸಂಭ್ರಮ
ತಿಂಡಿ ಖರೀದಿ ಮಾಡಲು ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಮೀನುಗಳನ್ನು ಕಂಡ ಮೊಂಡಲ್ ತಮ್ಮ ಅನುಭವವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
“ತಿಂಡಿ ಖರೀದಿ ಮಾಡಲು ನಾನು ನನ್ನ ಸಹೋದರನೊಂದಿಗೆ ತೆರಳುತ್ತಿದ್ದೆ. ನ್ಯೂ ಟೌನ್‌ನ ಕರಿಗಾರಿ ಭವನದ ಬಳಿ ಬೈಕ್‌ನ ದೀಪ ರಸ್ತೆ ಮೇಲೆ ಬಿದ್ದ ವೇಳೆ ಮಂಡಿಯುದ್ದ ನೀರಿನಲ್ಲಿ ಮೀನುಗಳು ಹರಿದಾಡುತ್ತಿದ್ದದ್ದನ್ನು ನೋಡಿದೆವು. ಬೈಕ್‌ಅನ್ನು ಪಕ್ಕದಲ್ಲಿ ಪಾರ್ಕ್ ಮಾಡಿ ಬರಿಗೈನಲ್ಲಿ ಮೀನು ಹಿಡಿಯಲು ಆರಂಭಿಸಿದೆವು. 4-5 ದೊಡ್ಡ ಕಾಟ್ಲಾಗಳನ್ನು ಹಿಡಿಯಲು ಸಫಲರಾದೆವು,” ಎಂದಿದ್ದಾರೆ ಮೊಂಡಲ್.
“ನನ್ನ ಚಿಕ್ಕಪ್ಪ ಆ ಜಾಗದ ಪಕ್ಕದಲ್ಲೇ ವಾಸಿಸುತ್ತಾರೆ. ಮೊದಲು ನಾವು ಹೇಳಿದಾಗ ನಂಬದ ಅವರು ವಿಡಿಯೋ ಕಾಲ್ ನೋಡಿದ ಕೂಡಲೇ ತಮ್ಮ ಗೆಳೆಯನೊಂದಿಗೆ ಮೀನಿನ ಬಲೆ ತೆಗೆದುಕೊಂಡು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ರಾತ್ರಿ 10ಗಂಟೆಯಿಂದ ಬೆಳಿಗ್ಗೆ 1:40ರ ವರೆಗೆ ಐದು ಕೆಜಿ ಮೀನುಗಳನ್ನು ಹಿಡಿಯಲು ಅವರು ಸಫಲರಾಗಿದ್ದಾರೆ,” ಎಂದು ಮೊಂಡಲ್ ಹೇಳಿದ್ದಾರೆ.
ರಾತ್ರಿಯೆಲ್ಲಾ ಮೀನು ಹಿಡಿಯಲು ಜನಜಂಗುಳಿ ನೆರೆದಿತ್ತು ಎನ್ನುವ ಮೊಂಡಲ್ ತಾವು 15 ಕಿಲೋ ಮೀನು ಹಿಡಿದಿದ್ದಾಗಿ ತಿಳಿಸಿದ್ದಾರೆ.