ಕೋಲ್ಕತ್ತಾದಲ್ಲಿ ನಡೆದ ‘ರಿಕ್ಲೈಮ್ ದಿ ನೈಟ್’ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರಗಿದೆ. ಗುಂಪೊಂದು ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪ್ರವೇಶಿಸಿ ಪೀಠೋಪಕರಣಗಳಿಗೆ ಹಾನಿ ಮಾಡಿದೆ. ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರಿಂದ ಹಲವರು ಗಾಯಗೊಂಡಿದ್ದಾರೆ.
ಬುಧವಾರ ರಾತ್ರಿ 11.55ಕ್ಕೆ ಪಶ್ಚಿಮ ಬಂಗಾಳ ಮತ್ತು ರಾಷ್ಟ್ರದಾದ್ಯಂತ ‘ರಿಕ್ಲೈಮ್ ದಿ ನೈಟ್’ ಅಭಿಯಾನದ ಭಾಗವಾಗಿ ಪ್ರತಿಭಟನೆಗಳು ಪ್ರಾರಂಭವಾದವು, ಇದು ಸಾಮಾಜಿಕ ಮಾಧ್ಯಮಗಳ ಮೂಲಕ ವೇಗವನ್ನು ಪಡೆದುಕೊಂಡಿದ್ದು, ಎಲ್ಲ ವರ್ಗಗಳ ಸಾವಿರಾರು ಮಹಿಳೆಯರು ಬೀದಿಗಿಳಿದು, ಫಲಕಗಳನ್ನು ಹಿಡಿದು ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಶಾಂತಿಯುತವಾಗಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಗುಂಪು ಬಲವಂತವಾಗಿ ಆಸ್ಪತ್ರೆಗೆ ಪ್ರವೇಶಿಸಿದ್ದರಿಂದ ಆರ್‌ಜಿ ಕರ್ ಆಸ್ಪತ್ರೆಯ ಹೊರಗೆ ಪರಿಸ್ಥಿತಿ ಹಿಂಸಾತ್ಮಕ ತಿರುವು ಪಡೆದುಕೊಂಡಿದೆ. ಜನಸಮೂಹವು ಆಸ್ಪತ್ರೆಯ ಹೊರಗೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಕುರ್ಚಿಗಳನ್ನು ಒಡೆದು ಹಾಕಿದೆ. ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವನ್ನು ಧ್ವಂಸಗೊಳಿಸಿದ್ದು, ಹೊರಗೆ ನಿಲ್ಲಿಸಿದ್ದ ಕೆಲವು ಪೊಲೀಸ್ ವಾಹನಗಳನ್ನು ಸಹ ಹಾನಿಗೊಳಿಸಲಾಗಿದೆ. ಪೊಲೀಸರು ಗುಂಪನ್ನು ಚದುರಿಸಲು ಲಾಠಿಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಿದ್ದಾರೆ.